ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಸ್ತ್ರೀ ಎಂಬ ಪದಕ್ಕೆ ಬೆಲೆ ಕಟ್ಟಲಾಗದ ಅನಂತವಾದ ಭಾವನೆ ಶಕ್ತಿ ಇದೆ. ಮಹಿಳೆ ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಛಾಪು ಮೂಡಿಸಿ ಸಾಧನೆ ಮಾಡುತ್ತಿದ್ದಾಳೆ. ನಾಲ್ಕು ಗೋಡೆಗಳ ಮಧ್ಯ ಕಾಲ ಕಳೆಯುತ್ತಿದ್ದ ಮಹಿಳೆ ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾಳೆ. ಮಹಿಳೆಯರಿಗೆ ತಮ್ಮ ಪ್ರತಿಭೆ ತೋರಿಸಲು ಅವಕಾಶಗಳು ದೊರೆಯುತ್ತಿದೆ. ಮಹಿಳೆಯರಿಗೆ ಜೀವನದ ಪ್ರತಿರಂಗದಲ್ಲಿ ಪುರುಷರಿಗೆ ಸಮಾನವಾದ ಸ್ಥಾನ ಪಡೆಯವ ಹಕ್ಕು ಸಿಗುತ್ತಿದೆ. ಮಹಿಳೆ ಎಲ್ಲಾ ರಂಗದಲ್ಲಿ ಇನ್ನು ಹೆಚ್ಚು ಸಕ್ರೀಯವಾಗಿ ಅಭಿವೃದ್ಧಿ ಪಥದತ್ತ ಮುನ್ನಡೆದರೆ ಮಾತ್ರ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಯುಜಿಸಿ-ಎನ್‌ಇಟಿ ರಾಷ್ಟ್ರೀಯ ಪರೀಕ್ಷೆಯಲ್ಲಿ ರ‍್ಯಾಂಕ್ ವಿಜೇತೆ ಯು.ಸಂಗೀತಾ ಶೆಣೈ ಹೇಳಿದರು.

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಇವರ ಆಶ್ರಯದಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಆದಿತ್ಯವಾದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕುಂದಪ್ರಭ ಸಂಪಾದಕ ಯು.ಎಸ್.ಶೆಣೈ, ಮಹಿಳೆ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿದ್ದು, ಸ್ಥಾನಮಾನ ಪ್ರತಿಭೆಯಿಂದ ದೊರೆಯಬೇಕಿದೆ. ಸ್ಥಾನಮಾನಕ್ಕೆ ಅರ್ಹತೆ ಪಡೆಯಬೇಕು. ಮಹಿಳೆಯರಲ್ಲಿ ಆತ್ಮವಿಶ್ವಾಸ, ಕಾರ್ಯಕ್ಷಮತೆ, ಗುರಿ ಸಾಧಿಸುವ ಛಲ ಇರಬೇಕು. ಶಕ್ತಿ, ಶ್ರಮ ಮಹಿಳೆಯರಲ್ಲಿ ಇದ್ದಾಗ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.

ಗಂಗೊಳ್ಳಿ ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ಎನ್.ನಿರ್ಮಲಾ ಡಿ.ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿಯ ನಿರ್ದೇಶಕಿ ವತ್ಸಲಾ ಎಸ್.ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ ಶುಭಾಶಂಸನೆಗೈದರು. ಯುಜಿಸಿ-ಎನ್‌ಇಟಿ ರಾಷ್ಟ್ರೀಯ ಪರೀಕ್ಷೆಯಲ್ಲಿ ರ‍್ಯಾಂಕ್ ವಿಜೇತೆ ಯು.ಸಂಗೀತಾ ಶೆಣೈ ಅವರನ್ನು ಸಹಕಾರಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರಿನ ಸಹಕಾರಿಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ. ಅವರು ಸಹಕಾರ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು. ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್, ನಿರ್ದೇಶಕರಾದ ಜಿ.ವೆಂಕಟೇಶ ನಾಯಕ್, ಬಿ.ರಾಘವೇಂದ್ರ ಪೈ, ಮಾಲಾ ಕೆ.ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಕ್ಷಾ ಶ್ಯಾನುಭಾಗ್ ಸನ್ಮಾನಿತರನ್ನು ಪರಿಚಯಿಸಿದರು. ಶ್ರುತಿ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ಅಶ್ವಿನಿ ವಂದಿಸಿದರು.

Leave a Reply

Your email address will not be published. Required fields are marked *

four × 4 =