ಬೈಂದೂರು: ಸಮೀಪದ ಹೇನ್‌ಬೇರು ಪರಿಸರದ ಆಶಾ ನವೋದಯ ಗುಂಪಿನ ಸದಸ್ಯೆ ರಾಧಾ ದೇವಾಡಿಗ ಅವರ ಮಗಳು ಬೈಂದೂರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಜೂನ್ 17ರಂದು ಕಾಲೇಜಿನಿಂದ ಮನೆಗೆ ಬರುತ್ತಿರುವಾಗ ಮನೆ ಸಮೀಪದ ಆಕೇಶಿಯಾ ತೋಪಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಮನೆಗೆ ನವೋದಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಜೂನ್ ೧೯ರಂದು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ರೂ. 1ಲಕ್ಷ ನಗದನ್ನು ಕುಟುಂಬಕ್ಕೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಭಾಗದ ವಿದ್ಯಾರ್ಥಿಗಳ ಬೇಡಿಕೆಯಂತೆ ಹೆನ್‌ಬೇರ್‌ನಿಂದ ಬೈಂದೂರು ಕಾಲೇಜು ತನಕ ಸರ್ಕಾರ ವಾಹನದ ವ್ಯವಸ್ಥೆ ಮಾಡುವ ತನಕ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲೆ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಬಾರದು. ಅಲ್ಲದೇ ಕುಟುಂಬದ ತುರ್ತು ಅಗತ್ಯತೆಗಾಗಿ ಒಂದು ಲಕ್ಷ ರೂಪಾಯಿಯನ್ನು ನೀಡುತ್ತಿದ್ದೇವೆ. ಇಂಥಹ ದುರ್ಘಟನೆಗಳು ಭವಿಷ್ಯದಲ್ಲಿ ಘಟಿಸಬಾರದು ಎಂದು ಹೇಳಿದ ಅವರು, ಈ ಹಿಂದೆ ಇದೇ ಪರಿಸರದಲ್ಲಿ ಸರಣಿಯಾಗಿ ದನಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಕೂಡಾ ನಾವು ಸ್ಪಂದಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್.ರಾಜು ಪೂಜಾರಿ, ರಘುರಾಮ ಶೆಟ್ಟಿ, ಟಿಎಪಿಸಿಎಂಎಸ್ ಕುಂದಾಪುರ ಇದರ ಅಧ್ಯಕ್ಷರಾದ ಮಲ್ಯಾಡಿ ಮೋಹನದಾಸ್ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಾಮ ಉಪಸ್ಥಿತರಿದ್ದರು.
ಇದನ್ನೂ ಓದಿ
* ಬೈಂದೂರು ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವು. ಕೊಲೆ ಶಂಕೆ
* ವಿದ್ಯಾರ್ಥಿನಿ ಅಕ್ಷತಾ ಸಾವು: ಪ್ರತಿಭಟನೆ, ಚುರುಕುಗೊಂಡ ತನಿಕೆ