ಅಗಲಿದ ಅಜಾತಶತ್ರು ಬರೆಗುಂಡಿ ಶ್ರೀನಿವಾಸ ಚಾತ್ರ

ದಶಕಗಳಿಂದ ತಮ್ಮ ಉನ್ನತ ಸಂಸ್ಕಾರ, ಸಜ್ಜನಿಕೆ, ಸ್ನೇಹಶೀಲತ್ವದ ಮೂಲಕ ಸಮಾಜದ ಸರ್ವ ವರ್ಗದವರ ಪಾಲಿನ ಪ್ರೀತಿಗೆ ಪಾತ್ರರಾದವರು ಬರೆಗುಂಡಿ ಶ್ರೀನಿವಾಸ ಚಾತ್ರರು ನಮ್ಮನ್ನು ಅಗಲಿದರೂ ಅವರ ನೆನಪು ಅಮರವಾಗಿದೆ.

ವ್ಯಕ್ತಿತ್ವಗಳು ರಾಜಕೀಯ ಮತ್ತು ಧರ್ಮದ ಸಂಕುಚಿತತೆಗೆ ಒಳಗಾಗಿ, ಸೀಮಿತ ಸೀಮೆಗಳ ಒಳಗೆ ಬಂಧಿಯಾಗಿ, ಆಕರ್ಷಣೆ- ಪ್ರಭಾವ- ವ್ಯಾಪ್ತಿಗಳನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಸಮಾಜದಲ್ಲಿ ಪ್ರತ್ಯೇಕ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಸುದೀರ್ಘ ಕಾಲದಿಂದ ಸ್ಥಾಪಿಸಿಕೊಂಡು ಬಂದಿದ್ದರು. ಸಾಮಾಜಿಕ- ಧಾರ್ಮಿಕ ನಾಯಕತ್ವಗಳ ಕಾಲಕಾಲದ ನಿರ್ಣಾಯಕ ಭೂಮಿಕೆಗಳನ್ನು ಸೊಗಸಾಗಿ ಮತ್ತು ಸುಸೂತ್ರವಾಗಿ ನಿಭಾಯಿಸಿದ ಹಿರಿಮೆ ಇವರದ್ದು. ಸದಾ ತಮಗಿಂತ ಕಿರಿಯರಿಗೆ ಆದರ, ಆಶ್ರಯ, ಅವಕಾಶಗಳನ್ನು ನೀಡುತ್ತಾ, ಶ್ರೇಯಸ್ಸನ್ನು ಹಾರೈಸುತ್ತಾ, ಹಿರಿತನದ ಸಿರಿ-ಸಿಹಿಗಳನ್ನು ಸಮನಾಗಿ ಸರ್ವರಿಗೂ ಹಂಚಿದವರು. ದೀರ್ಘಕಾಲದಿಂದ ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅಗತ್ಯದ ಕಾಯಕ-ಕರ್ಮಗಳು ಯಥಾವತ್ತಾಗಿ ನೇರವೇರುವಂತೆ ನೋಡಿಕೊಂಡು, ಬದುಕಿನ ಕೊನೆಯವರೆಗೂ ಅಪಾರ ಬದ್ಧತೆಯನ್ನು ಮೆರೆದು ಮಾದರಿಯಾಗಿದ್ದಾರೆ.

ಬದುಕಿನ ಸಂಧ್ಯಾಕಾಲದಲ್ಲೂ ಸದಾ ಚಟುವಟಿಕೆಯಿಂದಿದ್ದು ಯಾವ ಹಂತದಲ್ಲೂ ಜೀವನೋತ್ಸಾಹವನ್ನು ಕಳೆದುಕೊಂಡವರಲ್ಲ. ಸರಳತೆ, ಸಜ್ಜನಿಕೆ, ಸುಪಥಗಳಿಂದ ಕೂಡಿದ ಸಾರ್ಥಕವಾದ ಸುದೀರ್ಘ ಬದುಕಿನ ಪುಟಕ್ಕೆ ಇಂದು ಪೂರ್ಣವಿರಾಮ ಬಿದ್ದರೂ, ಶ್ರೀನಿವಾಸ ಚಾತ್ರರು ಬಿಟ್ಟುಹೋದ ನೆನಪು-ಆದರ್ಶಗಳು ಅಮರತ್ವವನ್ನು ಹೊಂದಲಿವೆ.

– ಮುಷ್ತಾಕ್ ಹೆನ್ನಾಬೈಲ್

Leave a Reply

Your email address will not be published. Required fields are marked *

11 + sixteen =