ಅಗ್ನಿಶಾಮಕ ದಳದಿಂದ ಅಣಕು ಮಾಹಿತಿ, ಪ್ರಾತ್ಯಕ್ಷಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಅಗ್ನಿ ಆಕಸ್ಮಿಕ ತಡೆ ಹಾಗೂ ಪರಿಹಾರೋಪಾಯ ಕುರಿತು ಎಲ್ಲರಿಗೆ ಅರಿವು ಇರಬೇಕು. ವಿದ್ಯಾರ್ಥಿಗಳು ಈ ಕುರಿತಾದ ಪರಿಜ್ಞಾನ ಪಡೆದರೆ ಅಂತಹ ಸಂದರ್ಭ ಎದುರಾದಾಗ ಸಹಕರಿಸಬಹುದು. ಅದರ ಅರಿವು ಇಲ್ಲದವರಿಗೂ ಮಾಹಿತಿ, ಮಾರ್ಗದರ್ಶನ ನೀಡಬಹುದು ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಎಂ.ಎನ್. ಶೇರುಗಾರ್ ಹೇಳಿದರು.

ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ರೋವರ್ ರೇಂಜರ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಾಲೇಜಿನ ವಿವಿಧ ಸಮಿತಿಗಳ ಆಶ್ರಯದಲ್ಲಿ ಕುಂದಾಪುರ ಅಗ್ನಿಶಾಮಕ ಠಾಣೆ ಸಿಬ್ಬಂದಿ ಗುರುವಾರ ಆಯೋಜಿಸಿದ್ದ ಅಗ್ನಿ ಆಕಸ್ಮಿಕ ತಡೆ ಮತ್ತು ಪರಿಹಾರ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ರಘು ನಾಯ್ಕ್ ಬೆಂಕಿ ಆಕಸ್ಮಿಕ, ಅನ್ಯ ಅವಘಡ ನಡೆಯದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಸಂಭವಿಸಿದಾಗ ತಡೆಗಟ್ಟುವ ಅರಿವು ನೀಡುವುದು ಕಾರ್ಯಕ್ರಮದ ಉದ್ದೇಶ. ವಿದ್ಯಾರ್ಥಿಗಳು ಇದರ ಗರಿಷ್ಠ ಲಾಭ ಪಡೆಯಬೇಕು ಎಂದರು.

ಅಗ್ನಿಶಾಮಕ ಠಾಣೆ ಸಹಾಯಕ ಅಧಿಕಾರಿ ಕೆ.ಎನ್. ಮೊಗೇರ್ ಅವರು ಮಾತನಾಡಿ, ಅಗ್ನಿ ಅನಾಹುತ ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಿದರು.

ಅಧಿಕಾರಿಗಳಾದ ರಾಘವೇಂದ್ರ ಅವರು ಸಾಕ್ಷಚಿತ್ರ, ದೃಶ್ಯಾವಳಿಗಳ ಮೂಲಕ ಅಗ್ನಿ ಅವಘಡದ ಕುರಿತು ವೈಜ್ಞಾನಿಕ ಅಧ್ಯಯನಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಮನೆ, ಬಹುಮಹಡಿ ಕಟ್ಟಡ, ಗ್ಯಾಸ್, ಪೆಟ್ರೋಲ್- ಡೀಸೆಲ್, ಕಾಳ್ಗಿಚ್ಚು ಮುಂತಾದ ಅವಘಡಗಳಿಂದ ಪಾರಾಗುವ ಮತ್ತು ಅವುಗಳನ್ನು ನಿಯಂತ್ರಣಕ್ಕೆ ತರುವ ವಿಧಾನಗಳ ಬಗೆಗೆ, ಜೀವ ಮತ್ತು ಪರಿಸರ ರಕ್ಷಣೆ ಕುರಿತು ಪ್ರಾತ್ಯಕ್ಷಿಕೆಗಳನ್ನು ನಡೆಸಿದರು.

ಸಹಾಯಕ ಪ್ರಾಧ್ಯಾಪಕ ನವೀನ್‌ಕುಮಾರ್ ಸ್ವಾಗತಿಸಿದರು. ರೋವರ್ ರೇಂಜರ್ ಘಟಕದ ಸಂಚಾಲಕ ವಿನೋದ್ ಬಸುಪಟ್ಟದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಶಿವಕುಮಾರ ಪಿ. ವಿ ವಂದಿಸಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಗೀತಾ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಚಾಲಕಿ ಲತಾ ಪೂಜಾರಿ, ಐಕ್ಯೂಎಸಿ ಸಂಚಾಲಕ ಡಾ. ಅಶ್ವಥ್ ದೇವರಾಯ ನಾಯ್ಕ್ ಇದ್ದರು.

 

Leave a Reply

Your email address will not be published. Required fields are marked *

4 × 2 =