ಅಡಿಗರ ಭಾವಗೀತೆ ಗಾಯನ ತರಬೇತಿ: ಅಡಿಗರ ಕಾವ್ಯ ಸಾವಯವ ಶಿಲ್ಪ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಓದುಗನ ಮನಸ್ಸಿನ ಕಣ್ಣಿಗೆ ಕಟ್ಟುವ ಪ್ರತಿಮೆಗಳನ್ನು ರೂಪಿಸುವ ಭಾಷೆ, ಹೃದಯ ಸಂಸ್ಪರ್ಷಿಯಾಗುವ ಭಾವ, ಚಿಂತನೆಗೆ ಹಚ್ಚುವ ಬುದ್ಧಿಪ್ರಧಾನವೆನಿಸುವ ವಿಷಯಗಳಿಂದ ಕೂಡಿದ ಮೊಗೇರಿ ಗೋಪಾಲಕೃಷ್ಣ ಅಡಿಗರ ಹಲವು ಕವನಗಳು ಸಾವಯವ ಶಿಲ್ಪದಂತೆ ಕಂಡುಬರುತ್ತವೆ. ಅವು ಒಂದು ಓದಿಗೆ ದಕ್ಕುವವುಗಳಲ್ಲ ಎಂದು ಉಪ್ಪುಂದದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು.

Call us

Call us

ಸಿರಿ ಮೊಗೇರಿ ಸಮಷ್ಟಿ ವೇದಿಕೆಯ ಆಶ್ರಯದಲ್ಲಿ ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಮೊಗೇರಿ ಗೋಪಾಲಕೃಷ್ಣ ಅಡಿಗರ ಭಾವಗೀತೆಗಳನ್ನು ಹಾಡುವ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಅಡಿಗರ ಕಾವ್ಯದ ಕ್ಲಿಷ್ಟತೆಯ ಕಾರಣದಿಂದ ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಅಪಾಯದ ಕುರಿತು ಅವರು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಎ. ಎಸ್.ಎನ್. ಹೆಬ್ಬಾರ್ ಕಾವ್ಯ ಕಾಗದದಲ್ಲಿದ್ದರೆ ಸಾಲದು. ಅದು ಜೀವ, ತೇಜಸ್ಸು ಮತ್ತು ಜೀವಂತಿಕೆಯಿಂದ ಹೊರ ಹೊಮ್ಮಬೇಕಾದರೆ ಹಾಡಾಗಿ ಪ್ರವಹಿಸಬೇಕು. ಆ ದೃಷ್ಟಿಯಿಂದ ಹಾಡುವ ತರಬೇತಿ ಒಂದು ಅರ್ಥವತ್ತಾದ ಕಾರ್ಯಕ್ರಮ ಎಂದರು. ಚಲನಚಿತ್ರ ನಟ ರಮೇಶ ಭಟ್ ಸಮೀಪದ ಮಂಕಿ, ಮಹಾಬಲೇಶ್ವರದಲ್ಲಿನ ತಮ್ಮ ಬಾಲ್ಯದ ಬದುಕು ಮತ್ತು ಅಡಿಗರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.

Call us

Call us

ಶಾಲೆಯ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಸ್ವಾಗತಿಸಿದರು. ವೇದಿಕೆಯ ಸಂಯೋಜಕ ಮೊಗೇರಿ ಜಯರಾಮ ಅಡಿಗ ನಿರೂಪಿಸಿ, ವಂದಿಸಿದರು. ಸುಗಮ ಸಂಗೀತದ ಸಾಧಕ ಗರ್ತಿಕೆರೆ ರಾಘವೇಂದ್ರ ರಾಯರನ್ನು ಆರ್. ಕೆ. ಸಂಜೀವ ರಾವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕೆ. ಎಸ್. ಪ್ರಕಾಶ ರಾವ್ ಸನ್ಮಾನಿಸಿದರು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಗರ್ತಿಕೆರೆ ಅವರ ಕಲಾರಾಧನೆ ಕುರಿತು ಮಾತನಾಡಿದರು.

ಎರಡು ದಿನಗಳ ತರಬೇತಿಯಲ್ಲಿ ರಾಘವೇಂದ್ರ ರಾವ್ ಮತ್ತು ಗಣೇಶ ಗಂಗೊಳ್ಳಿ ತರಬೇತಿ ನೀಡಿದರು. ನಗರ ಚಂದ್ರಶೇಖರ ಉಡುಪ, ಸುನಿಲ ಉಡುಪ, ಯು. ಶ್ರೀನಿವಾಸ ಪ್ರಭು ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಅಡಿಗರ ಕವನಗಳನ್ನು ಹಾಡಿದರು.

ಕುಂದ ಅಧ್ಯಯನ ಕೇಂದ್ರ, ಆರ್. ಕೆ. ಸಂಜೀವ ರಾವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನ ಶಿವರಾಮ ಕಾರಂತ ವೇದಿಕೆ ಸಹಯೋಗದಲ್ಲಿ ನಡೆದ ಈ ತರಬೇತಿಗೆ ನಾಯ್ಕನಕಟ್ಟೆಯ ಸಂವೇದನಾ ಟ್ರಸ್ಟ್, ಅರೆಹಾಡಿ ನಾಗ ಜಟ್ಟಿಗ ಸಂಗೀತ ಕೇಂದ್ರ, ವಿಪ್ರ ರಂಜನಿ, ಲಾವಣ್ಯ, ಸುರಭಿ, ಕುಂದಾಪುರದ ಸಾಧನಾ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ ಸಹಕರಿಸಿದ್ದುವು.

Leave a Reply

Your email address will not be published. Required fields are marked *

15 − 9 =