ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈ ಬಾರಿಯ ಲೋಕಸಭಾ ಚುನಾವಣೆ ದೇಶ ಒಂದು ಕುಟುಂಬ ಎಂಬ ನೆಲೆಯಲ್ಲಿ ಕೆಲಸ ಮಾಡುವ ಬಿಜೆಪಿಯ ನರೇಂದ್ರ ಮೋದಿ ಮತ್ತು ದೇಶ ಇರುವುದು ನಮ್ಮ ಕುಟುಂಬಗಳಿಗಾಗಿ ಎಂದು ಯೋಚಿಸುವ ಕಾಂಗ್ರೆಸ್, ಜೆಡಿಎಸ್ ನಡುವಿನ ಹೋರಾಟವಾಗಲಿದೆ. ಇದನ್ನು ಅರ್ಥಮಾಡಿಕೊಂಡಿರುವ ಮತದಾರರು ಬಿಜೆಪಿಯನ್ನು ಗೆಲ್ಲಿಸಿ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡಲಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಬಿ. ವೈ. ರಾಘವೇಂದರ ಹೇಳಿದರು.
ಸೋಮವಾರ ನಂದನವನದ ಖಾಸಗಿ ಹೋಟೆಲ್ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಭರವಸೆಯ ಮಾತನಾಡಿದರು. ದೇಶದ ಜನರು ಈಗ ಅಭಿವೃದ್ಧಿ ಮತ್ತು ರಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ. ಈ ಕೆಲಸ ಬಿಜೆಪಿ ಮತ್ತು ಮೋದಿ ಅವರಿಂದ ಮಾತ್ರ ಸಾಧ್ಯ ಎನ್ನುವ ಭರವಸೆ ಅವರಲ್ಲಿ ಮೂಡಿದೆ. ಅದರ ಜತೆಗೆ ಮೋದಿ ನೇತೃತ್ವದ ಸರ್ಕಾರದ ಐದು ವರ್ಷಗಳ ಸಾಧನೆ ನೋಡಿ ಮತ ಹಾಕಲಿದ್ದಾರೆ. ಕ್ಷೇತ್ರದ ಎಲ್ಲ ೮ ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂತಹ ವಾತಾವರಣ ಇದೆ ಎಂದು ಅವರು ಹೇಳಿದರು.
ಬೈಂದೂರಿನಲ್ಲಿ ಒಂದು ವರ್ಷದ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಬಿ. ಎಂ. ಸುಕುಮಾರ ಶೆಟ್ಟಿ ಈ ಕನಿಷ್ಠ ಅವಧಿಯಲ್ಲಿ ರೂ ೧೭೮ ಕೋಟಿ ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಲೋಕಸಭಾ ಉಪ ಚುನಾವಣೆ ಮುಗಿದು ೬ ತಿಂಗಳಿನಲ್ಲಿ ತಮ್ಮಿಂದಲೂ ಸಾಕಷ್ಟು ಕೆಲಸ ಆಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉತ್ತಮ ಸಂಘಟನೆ ಇದೆ. ಬೂತ್ ಮಟ್ಟದ ಕಾರ್ಯಕರ್ತರು ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಪ್ರತಿ ಮನೆಗೂ ಮುಟ್ಟಿಸಲಿದ್ದಾರೆ. ಇಲ್ಲಿ ನೇರ ಹಣಾಹಣಿ ಆದರೂ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು, ಮೋದಿ ಪ್ರಧಾನಿ ಆಗಬೇಕು ಎಂಬ ಭಾವನೆ ಮತದಾರರಲ್ಲಿ ಮನೆಮಾಡಿದೆ. ಈ ಚುನಾವಣೆಯಲ್ಲಿ ಮತದಾರರು ಬಿಜೆಪಿ ಕೈಹಿಡಿಯಲು ಇವೆಲ್ಲವೂ ಕಾರಣಗಳಾಗಲಿವೆ ಎಂದರು. ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ೨೨ಕ್ಕೆ ಕಡಿಮೆ ಇಲ್ಲದಷ್ಟು ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದರು.
ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯದ ಕೊರತೆಯಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಮರಳು, ಜಲ್ಲಿ ಕೃತಕ ಅಭಾವ ಸೃಷ್ಟಿಸಿರುವುದರಿಂದ ಖಾಸಗಿ ನಿರ್ಮಾಣ ಕಾರ್ಯಗಳೂ ಸ್ಥಗಿತವಾಗಿವೆ. ಬೈಂದೂರು ತಾಲ್ಲೂಕು ಘೋಷಣೆಯಾಗಿ ವರ್ಷ ಕಳೆದಿದೆ. ಇಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಲವು ಕಾಮಗಾರಿಗಳು ಅರ್ಧದಲ್ಲಿ ನಿಂತಿವೆ. ಮೈತ್ರಿ ಸರ್ಕಾರದ ವಿರುದ್ಧ ಜನರ ಅಸಮಾಧಾನ ಹೆಚ್ಚಾಗಿದೆ. ಈ ಬಾರಿ ವಿರೋಧ ಪಕ್ಷಗಳ ಸವಾಲನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಲಾಗುವುದು. ಕಳೆದ ಬಾರಿಯ ಫಲಿತಾಂಶವೇ ಮರುಕಳಿಸಲಿದೆ ಎಂದು ಬಿ. ವೈ. ರಾಘವೇಂದ್ರ ಹೇಳಿದರು.
ಕ್ಷೇತ್ರ ಕಾರ್ಯದರ್ಶಿ ದೀಪಕ್ಕುಮಾರ ಶೆಟ್ಟಿ ಸ್ವಾಗತಿಸಿ ವಂದಿಸಿದರು. ರಾಜ್ಯ ರೈತ ಮೋರ್ಚಾ ಅಧ್ಯಕ್ಷ ದತ್ತಾತ್ರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟವಾಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪುಷ್ಪರಾಜ ಶೆಟ್ಟಿ, ಸದಾಶಿವ ಪಡುವರಿ, ಕ್ಷೇತ್ರ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಭಾರಿ ಪ್ರವೀಣಕುಮಾರ್ ಗುರ್ಮೆ ಇದ್ದರು.