ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಅರಾಟೆ ಸೇತುವೆ ರಾ.ಹೆ-66ರಲ್ಲಿ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಪರಿಣಾಮ ಬೈಕ್ ಸವಾರ ಚಿಂದಿಯಾಗಿ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಸಾವನ್ನಪ್ಪಿದ ಬೈಕ್ ಸವಾರನನ್ನು ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬವರ ಪುತ್ರ ವಿಖ್ಯಾತ್ (24) ಎಂದು ಗುರುತಿಸಲಾಗಿದೆ.
ತಡ ರಾತ್ರಿ ಹೈವೇ ಪೆಟ್ರೋಲ್ ವಾಹನ ಸಂಚಾರದ ಸಂದರ್ಭ ಅನಾಥವಾಗಿ ಚಿಂದಿಯಾದ ಸ್ಥಿತಿಯಲ್ಲಿ ವಿಖ್ಯಾತ್ ದೇಹ ಹಾಗೂ ಬೈಕ್ ಬಿದ್ದಿರುವುದು ಪತ್ತೆಯಾಗಿದ್ದು, ಛಿದ್ರಗೊಂಡಿದ್ದ ಮೃತದೇಹವನ್ನು ಕುಂದಾಫುರ ಸರ್ಕಾರೀ ಆಸ್ಪತ್ರೆಗೆ ಸಾಗಿಸಲಾಯಿತು. ಕುಂದಾಪುರದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಖ್ಯಾತ್ ಸೋಮವಾರ ರಾತ್ರಿ ಕೆಲಸ ಮುಗಿಸಿ ತನ್ನ ಹೀರೋ ಬೈಕಿನಲ್ಲಿ ಮನೆ ಕಡೆಗೆ ಪ್ರಯಾಣಿಸುತ್ತಿದ್ದರು. ರಾತ್ರಿ ರಾ. ಹೆ-66ರಲ್ಲಿ ಅರಾಟೆ ಸೇತುವೆ ಮೇಲೆ ಬರುತ್ತಿದ್ದಾಗ ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಅಪರಿಚಿತ ಘನ ವಾಹನವೊಂದು ವಿಖ್ಯಾತ್ ಬೈಕಿಗೆ ಡಿಕ್ಕಿ ಹೊಡೆದಿದ್ದು, ವಿಖ್ಯಾತ್ ಧರಿಸಿದ್ದ ಹೆಲ್ಮೆಟ್ ಸೇತುವೆ ಮೇಲೆ ಬಿದ್ದಿದೆ. ಅಪರಿಚಿತ ವಾಹನವು ಬೈಕ್ ಸಮೇತ ವಿಖ್ಯಾತ್ನನ್ನು ಎಳೆದೊಯ್ದಿದ್ದು, ಸೇತುವೆ ಇನ್ನೊಂದು ಮಗ್ಗುಲಲ್ಲಿ ವಿಖ್ಯಾತ್ ದೇಹ ಬಿದ್ದಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಹೆಮ್ಮಾಡಿ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಬೈಕ್ ಪತ್ತೆಯಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಹಾಗೂ ವಿಖ್ಯಾತ್ ದೇಹ ಚಿಂದಿಯಾಗಿವೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾಗಿ ಪರಾರಿಯಾಗಿರುವ ವಾಹನದ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.