ಅರೆಹೊಳೆ ’ಪಲ್ಲಕ್ಕಿ ಫ್ರೆಂಡ್ಸ್’: ವಿಶಿಷ್ಟ ಬೆಳ್ಳಿ ಹಬ್ಬ ’ರಜತ ಪಲ್ಲಕ್ಕಿ – 2020’

ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು : ನಾವುಂದ ಗ್ರಾಮದ ಸೌಪರ್ಣಿಕಾ ತಟದ ಅರೆಹೊಳೆ ಶ್ರೀ ಮಹಾಲಿಂಗೇಶ್ವರ-ಮಹಾಗಣಪತಿ ದೇವಸ್ಥಾನದಲ್ಲಿ ಮಾಘ ಪೌರ್ಣಿಮೆಯಂದು ನಡೆಯುವ ಶ್ರಿ ಮನ್ಮಾಹಾರಥೋತ್ಸವದ ವೇಳೆ ಎಂಟು ದಿನ ಗ್ರಾಮದ ವಿವಿಧೆಡೆ ನಡೆಯುವ ಕಟ್ಟಳೆಯ ವಸಂತ ಪೂಜೆಗೆ ದೇವರ ಉತ್ಸವ ಮೂರ್ತಿಯನ್ನು ಪಲ್ಕಕ್ಕಿಯಲ್ಲಿ ಕೊಂಡೊಯ್ಯುವುದು ಅನೂಚಾನವಾಗಿ ಬಂದ ಸಂಪ್ರದಾಯ. ೨೫ ವರ್ಷಗಳ ಹಿಂದೆ ಪಲ್ಲಕ್ಕಿ ಹೊರಲು ಸಿಬ್ಬಂದಿ ಹಿಂದೆ ಸರಿದಾಗ ಅಸ್ತಿತ್ವಕ್ಕೆ ಬಂದುದು ’ಪಲ್ಲಕ್ಕಿ ಫ್ರೆಂಡ್ಸ್’ ಎಂಬ ಯುವಪಡೆ.

ಸಂಪ್ರದಾಯಕ್ಕೆ ಚ್ಯುತಿ ಬರುವುದೆಂದು ಚಿಂತಿತರಾದ ಅಂದಿನ ಆಡಳಿತ ಮೊಕ್ತೇಸರ ಯಜ್ಞನಾರಾಯಣ ಮಂಜ, ದೇವರ ಸೇವೆಯ ಹೊಣೆ ಹೊರಬೇಕು ಎಂದು ಊರಿನ ವಿಪ್ರ ಯುವಕರ ಮನ ಒಲಿಸಿದರು. ಮೊದಲ ವರ್ಷದಿಂದಲೇ ಯುವಕರು ಈ ಕಾಯಕದಲ್ಲಿ ಧನ್ಯತೆ ಕಂಡುಕೊಂಡರು. ತಮ್ಮನ್ನು ’ಅರೆಹೊಳೆ ಪಲ್ಲಕ್ಕಿ ಫ್ರೆಂಡ್ಸ್’ ಎಂದು ಗುರುತಿಸಿಕೊಂಡು ಸಂಘಟನೆಯ ರೂಪ ಪಡೆದರು. ಅಲ್ಲಿಂದ ಇಂದಿನ ವರೆಗೆ ದೇವರ ಈ ವಿಶಿಷ್ಟ ಗ್ರಾಮಸಂಚಾರಕ್ಕೆ ಚ್ಯುತಿ ಬಂದಿಲ್ಲ. ಮುಂದೆ ವರು ತಮ್ಮ ಸೇವೆಯನ್ನು ಊರಿನ ಅನ್ಯ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೂ ವಿಸ್ತರಿಸಿಕೊಂಡು ಜನಮೆಚ್ಚುಗೆ ಗಳಿಸಿದರು; ಮನೆ ಮಾತಾದರು.

ಇತ್ತೀಚೆಗೆ ಸಂಪನ್ನವಾದ ರಥೋತ್ಸವದಲ್ಲಿ, ಪಲ್ಲಕ್ಕಿ ಫ್ರೆಂಡ್ಸ್ ತಮ್ಮ ಸೇವೆಯ ಬೆಳ್ಳಿಹಬ್ಬವನ್ನು ’ರಜತ ಪಲ್ಲಕ್ಕಿ – 2020’ ಹೆಸರಿನಲ್ಲಿ ವಿಶಿಷ್ಟವಾಗಿ ಆಚರಿಸಿದರು. ಸಂಜೆ ಮೇಲ್‌ಗಂಗೊಳ್ಳಿಯ ಡಾ| ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ಸದಸ್ಯರಿಂದ ’ಕರಗ ಕೋಲಾಟ’ ಆಯೋಜಿಸಿ, ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಮನೋರಂಜನೆ ನೀಡಿದರು. ಸಂಘಟನೆಯ ಹುಟ್ಟಿಗೆ ಕಾರಣರಾದ ದಿ. ಯಜ್ಞನಾರಾಯಣ ಮಂಜ ಮತ್ತು ಈಚೆಗೆ ನಿಧನರಾದ ತಂತ್ರಿ ಕೋಟ ಯಜ್ಞನಾರಾಯಣ ಸೋಮಯಾಜಿ ಅವರ ನೆನಪಿಗಾಗಿ ’ಯಜ್ಞಾಮೃತ’ ಎಂಬ ವಾದನ ಬಳಗಕ್ಕೆ ಪ್ರಸಕ್ತ ತಂತ್ರಿ ಕೃಷ್ಣ ಸೋಮಯಾಜಿ ಅವರಿಂದ ಚಾಲನೆ ಕೊಡಿಸಿದರು. ಆಡಳಿತ ಮೊಕ್ತೇಸರ ಮಹಾದೇವ ಮಂಜ, ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ ಎನ್. ಶೆಟ್ಟಿ, ಸಂಘಟನೆಯ ಹಿರಿಯ ಸದಸ್ಯರಾದ ಶ್ರೀ ಗಣಪಯ್ಯ ಮಹಾಲೆ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಪೂಜಾರಿ, ನಾಗಸ್ವರ ವಾದಕ ಮಂಜು ದೇವಾಡಿಗ ಆಕಳಬೈಲು ಯಜ್ಞಾಮೃತ ಸಂಗೀತ ಬಳಗದ ವಾದನ ಸಾಧನಗಳಾದ ಶಂಖ, ಜಾಗಟೆ, ಕಂಜೀರ, ಕೈಗಂಟೆ ಮತ್ತು ತಾಳಗಳನ್ನು ಬಾರಿಸುವುದರ ಮೂಲಕ ಯುವತಂಡದ ಬೆನ್ನುತಟ್ಟಿದರು. ನೂತನ ಸಂಗೀತ ಬಳಗ ದೇವರ ಅಷ್ಟಾವಧಾನ ಸೇವೆಯಲ್ಲಿ ಪ್ರಥಮ ಕಾರ್ಯಕ್ರಮವನ್ನು ನೀಡಿತು. ತಂಡದಲ್ಲಿ ಸದಸ್ಯರಾದ ಶಿವರಾಮ ಮಧ್ಯಸ್ಥ, ಯೋಗೀಶ ಕಾರಂತ, ಉಮೇಶ ಹೆಬ್ಬಾರ್, ನರಸಿಂಹಮೂರ್ತಿ ಐತಾಳ್, ಉಮೇಶ ಮಧ್ಯಸ್ಥ, ವೆಂಕಟೇಶ ಶಾಸ್ತ್ರಿ, ಶ್ರೀನಿವಾಸ ಕಾರಂತ, ಗಣೇಶ ಮಧ್ಯಸ್ಥ, ರಾಘವೇಂದ್ರ ಕಾರಂತ, ವೀರೇಂದ್ರ ಭಟ್, ಸುಬ್ರಹ್ಮಣ್ಯ ನಾವಡ, ರಮಾನಂದ ಮಧ್ಯಸ್ಥ, ನಾಗೇಶ ಶ್ಯಾನುಭೋಗ್, ರಾಮರಾಜ ಮಧ್ಯಸ್ಥ, ನಾಗೇಂದ್ರ ಭಟ್, ಮಹೇಶ ಮಂಜ, ಮಂಜುನಾಥ ನಾವಡ, ಜಗದೀಶ ಹೆಬ್ಬಾರ್, ರಮೇಶ ಮಧ್ಯಸ್ಥ, ನಾಗರಾಜ ಶಾಸ್ತ್ರಿ, ಶ್ಯಾಮ್ ಸುಂದರ್, ವೆಂಕಟೇಶ ಮಧ್ಯಸ್ಥ ಮತ್ತು ಸದಾಶಿವ ರಾವ್ ಇದ್ದರು.

Leave a Reply

Your email address will not be published. Required fields are marked *

twenty + 4 =