ಆಗಸ್ಟ್ ಅಂತ್ಯದೊಳಗೆ ಪಿ.ಜಿ. ಗಳ ನೊಂದಣಿ ಕಡ್ಡಾಯ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥ ಮಹಿಳೆಯರು ವಿವಿಧ ಪಿಜಿಗಳಲ್ಲಿ ಆಶ್ರಯ ಪಡೆದಿದ್ದು, ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಪಿ.ಜಿ.ಗಳನ್ನು ಆಗಸ್ಟ್ ಅಂತ್ಯದೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ನೀಡಿದ್ದಾರೆ.

ಅವರು, ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮಣಿಪಾಲದ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹವೊಂದರ ಕಟ್ಟಡ ದುರಸ್ಥಿ ನಡೆಯುತ್ತಿದ್ದು, ಮಹಿಳೆಯರ ಸುರಕ್ಷತೆಗೆ ಸಿಸಿ ಟಿವಿ ಅಳವಡಿಕೆಗೆ ಸೂಚಿಸಿದ್ದರೂ ಈವರೆಗೆ ಸಿಸಿಟಿವಿ ಅಳವಡಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ತಕ್ಷಣದಲ್ಲಿ ಸಿಸಿಟಿವಿ ಅಳವಡಿಸುವಂತೆ ಹಾಸ್ಟೆಲ್ ವಾರ್ಡನ್‌ಗೆ ಸೂಚನೆ ನೀಡಿ, ಆಗಸ್ಟ್ ೧೫ ರ ಒಳಗೆ ಹಾಸ್ಟೆಲ್‌ನಲ್ಲಿರುವ ಇತರ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಅವರಿಗೆ ಸೂಚಿಸಿದರು.

ಕಟಪಾಡಿಯಲ್ಲಿರುವ ಮಹಿಳಾ ಮಂಡಳಿ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ನಿರ್ಮಾಣಕಾರ್ಯ ಅನುದಾನ ಕೊರತೆಯಿಂದ ಕುಂಠಿತಗೊಂಡಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಹಿಳೆಯರು ಯಾವುದೇ ತುರ್ತು ಸಂದರ್ಭದಲ್ಲಿ ರಕ್ಷಣೆ ಹಾಗೂ ನೆರವಿಗೆ ಸಹಾಯವಾಣಿ ೧೮೧ಗೆ ಕರೆಮಾಡಿ, ಸಹಾಯ ಪಡೆಯಲು ಅವಕಾಶ ಇರುವ ಬಗ್ಗೆ ಮಾಹಿತಿ ನೀಡಿ, ಈ ಸಹಾಯವಾಣಿಗೆ ಈವರೆಗೆ ಬಂದಿರುವ ಕರೆಗಳು ಹಾಗೂ ಅವುಗಳ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಮುಂದಿನ ಸಭೆಯಲ್ಲಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಭಿಕ್ಷಾಟನೆಯಲ್ಲಿ ಗುರುತಿಸಿಕೊಂಡ ಮಕ್ಕಳನ್ನು ಗುರುತಿಸಿ ಮತ್ತೆ ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದ ಜಿಲ್ಲಾಧಿಕಾರಿ, ಭಿಕ್ಷಾಟಣೆಯಿಂದ ರಕ್ಷಿಸಲ್ಪಟ್ಟು ಶಾಲೆಗೆ ಸೇರಿಸ್ಪಟ್ಟ ಮಕ್ಕಳು ಮತ್ತೆ ಭಿಕ್ಷಾಟಣೆಯಲ್ಲಿ ತೊಡಗಿಕೊಳ್ಳದಂತೆ ರಕ್ಷಿಸಲು ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳ ಹಾಜರಾತಿಯ ವರದಿಯನ್ನು ಇಲಾಖೆಗೆ ನೀಡುವಂತೆ ಸೂಚನೆ ನೀಡಬೇಕು ಹಾಗೂ ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಬಗ್ಗೆ ಡಿಡಿಪಿಐ ಅವರು ಮಾಹಿತಿ ಪಡೆಯುತ್ತಿರಬೇಕು ಹಾಗೂ ಭಿಕ್ಷಾಟಣೆಯಿಂದ ರಕ್ಷಿಸಲ್ಪಟ್ಟು ಶಾಲೆಯಲ್ಲಿ ಒಂದು ವರ್ಷ ಪೂರೈಸಿದ ಮಕ್ಕಳನ್ನು ಮಕ್ಕಳ ಗ್ರಾಮ ಸಭೆಗಳಲ್ಲಿ ಗುರುತಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಶಾಲಾ ಕಾಲೇಜುಗಳಲ್ಲಿ ಹದಿಹರೆಯದ ಮಕ್ಕಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶಾಲಾ ಶಿಕ್ಷಕರನ್ನೇ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ ಜಿ ರಾಮ ತಿಳಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಚಟಕ್ಕೆ ಬಲಿಯಾದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಿಂದ ಎಷ್ಟು ಬಾರಿ ವೈದ್ಯರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಕುರಿತು ವರದಿ ನೀಡುವಂತೆ ಸೂಚನೆ ನೀಡಿದರು.

ಮಾದಕ ವ್ಯಸನಿಗಳನ್ನು ಬಂಧಿಸಿ ಬಿಡುಗಡೆ ಮಾಡುವ ಮೊದಲು ಮಾದಕ ವಸ್ತು ಪೂರೈಕೆ ಆಗುತ್ತಿರುವ ಮೂಲವನ್ನು ಪತ್ತೆ ಹಚ್ಚಿದರೆ ಈ ಪಿಡುಗನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಅಭಿಪ್ರಾಯ ಪಟ್ಟರು. ಇದಕ್ಕೆ ಎಎಸ್ಪಿ ಕುಮಾರ್‌ಚಂದ್ರ ಪ್ರತಿಕ್ರಿಯಿಸಿ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಸ್ತುತ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಮಾದಕ ವಸ್ತು ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಆನ್‌ಲೈನ್‌ನಲ್ಲಿ ಮಾದಕ ವಸ್ತುಗಳ ಪೂರೈಕೆ ಆಗುತ್ತಿರುವ ಬಗ್ಗೆ ಸೈಬರ್‌ಕ್ರೈಮ್ ಬ್ರಾಂಚ್‌ಗೆ ಮಾಹಿತಿ ನೀಡಿ ತನಿಖೆ ನಡೆಸುವಂತೆ ಸೂಚಿಸಿ, ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಮಾರಾಟವಾಗುತ್ತಿರುವ ಮೆಡಿಸಿನ್‌ಗಳನ್ನು ಪೂರೈಸುತ್ತಿರುವ ಅಂಗಡಿಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಬಾಲ್ಯ ವಿವಾಹ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಸಾಮೂಹಿಕ ವಿವಾಹ ನಡೆಸುವಾಗ ವಧು-ವರನ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಸೂಚನೆ ನೀಡಿದರು. ಹೊಸದಾಗಿ ಕಾನೂನಿನಲ್ಲಿರುವ ಶಿಕ್ಷೆಯ ಕುರಿತು ಅರಿವು ಮೂಡಿಸಬೇಕು. ಮಕ್ಕಳ ಸುರಕ್ಷಾ ಸಮಿತಿಯನ್ನು ಬಲ ಪಡಿಸುವ ಸಲುವಾಗಿ ನೋಡಲ್ ಆಫೀಸರಾಗಿ ಆಯ್ಕೆಗೊಂಡ ಶಿಕ್ಷಕರಿಗೆ ಮುಂದಿನ ತಿಂಗಳು ಕಾರ್ಯಗಾರ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಪ್ರೀ ಮ್ಯಾರೆಜ್ ಕೌನ್ಸಿಲಿಂಗ್ ಕಾರ್ಯಕ್ರಮ ನಡೆಯದಿರುವ ಬಗ್ಗೆ ಪ್ರತಿಕ್ರಿಯಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಕಾರ್ಯಕ್ರಮ ನಡೆಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ವರದಕ್ಷಿಣೆ ನಿಷೇಧ ಕಾಯ್ದೆಯಡಿ ೨೦೧೯ರಲ್ಲಿ ಈವರೆಗೆ ೧೩ ಪ್ರಕರಣಗಳು ದಾಖಲಾಗಿದ್ದು, ಕೌಟುಂಬಿಕ ಹಿಂಸೆಯ ೨೯ ಪ್ರಕರಣಗಳು ದಾಖಲಾಗಿದೆ ಎಂದು ಎಎಸ್ಪಿ ಕುಮಾರ್‌ಚಂದ್ರ ತಿಳಿಸಿದರು.

ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ನವೆಂಬರ್ ೨೦೧೮ ರಿಂದ ಜೂನ್ ೨೦೧೯ರ ವರೆಗೆ ಒಟ್ಟು ೩೨ ಪ್ರಕರಣಗಳು ದಾಖಲಾಗಿದ್ದು, ೨೦ ಪ್ರಕರಣಗಳು ಇತ್ಯರ್ಥಗೊಂಡಿದೆ. , ೧೧ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇತರೆ ೧ ಪ್ರಕರಣ ಬಾಕಿ ಇದೆ. ಸ್ಥೈರ್ಯ ನಿಧಿ ಯೋಜನೆಯಡಿಯಲ್ಲಿ ಈವರೆಗೆ ೩ ಮಂದಿಗೆ ತಲಾ ೨೫,೦೦೦ರೂ. ತುರ್ತು ಪರಿಹಾರ ನೀಡಲಾಗಿದೆ. ೨೦೧೯-೨೦ನೇ ಸಾಲಿನ ಜೂನ್ ವರೆಗೆ ಉಡುಪಿ ೨, ಕುಂದಾಪುರ ೭, ಕಾರ್ಕಳ ೧ ಒಟ್ಟು ೧೦ ಕೌಟುಂಬಿಕ ಹಿಂಸೆ ಪ್ರಕರಣಗಳು ದಾಖಲಾಗಿದ್ದು, ೭ ಪ್ರಕರಣ ಸಂರಕ್ಷಣಾಧಿಕಾರಿಗಳಿಂದ ಇತ್ಯರ್ಥಗೊಂಡಿದೆ. ೩ ಪ್ರಕರಣ ಬಾಕಿ ಇರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವೀಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

eighteen + 13 =