ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಬೈಲ್ ಟೆಲಿಗ್ರಾಮ್ ಆ್ಯಪ್ ಮೂಲಕ ಆನ್‌ಲೈನ್ ಬುಕ್ಕಿಂಗ್ ಬ್ಯುಸಿನೆಸ್ ಹೆಸರಿನಲ್ಲಿ ವಂಚನೆ ಎಸಗಿದ ಪ್ರಕರಣವೊಂದು ಕೋಟ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರುತಿ ರಾಘವೇಂದ್ರ ಎಂಬ ಟೆಲಿಗ್ರಾಂ ಖಾತೆಯಿಂದ ಮೇಕ್ ಮೈ ಟ್ರಿಪ್ ಸಂದೇಶದಡಿ ಆನ್ಲೈನ್ ಬುಕ್ಕಿಂಗ್ ಬ್ಯುಸಿನೆಸ್ ಎಂದು ನಂಬಿ ಸೇರಿದ್ದ ಕಾರ್ಕಡ ನಿವಾಸಿ ಎಂ.ಎನ್.ರಾಜು (44) ಒಟ್ಟು 23 ಲಕ್ಷ ರೂ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೇಕ್ ಮೈ ಟ್ರಿಪ್ ಪ್ರೊಫೈಲ್ ಪೇಜ್ ಮೂಲಕ ಕಸ್ಟಮರ್ ಆನ್ ಲೈನ್ ಆಓರ್ಡರ್ ಮಾಡಿದ್ದನ್ನು ಬುಕ್ಕಿಂಗ್ ಮಾಡಿ ಅದರ ಮೊತ್ತವನ್ನು ಪಾವತಿಸಿದರೆ ಒಟ್ಟು ಹಣ ಹಾಗೂ ಕಮಿಷನ್ ಸಂದಾಯವಾಗುವ ವ್ಯವಹಾರ ಎಂದು ನಂಬಿಸಲಾಗಿದೆ.
ಹಂತ ಹಂತವಾಗಿ ಅದಕ್ಕಾಗಿ ಹಣ ಪಾವತಿಸಿದ್ದು, 30ನೇ ಟಾಸ್ಕ್ ಪೂರ್ಣಗೊಂಡ ಬಳಿಕ ಹಣ ಹಿಂದಿರುಗಿಸುವಂತೆ ಸಂಬಂಧಿತರಿಗೆ ಸಂದೇಶ ಕಳಹಿಸಿದಾಗ, ಅವರು ಸರಕಾರದ ನಿಯಮಾನುಸಾರ ಈಗಾಗಲೆ ಪಾವತಿಸಿದ ಹಣದ ಅರ್ಧದಷ್ಟು 16,05,231 ರೂ. ಮೊತ್ತ ಪಾವತಿ ಮಾಡಬೇಕು. ಇಲ್ಲದಿದ್ದಲ್ಲಿ ಹೂಡಿಕೆ ಮಾಡಿದ ಹಣ ಲ್ಯಾಪ್ಸ್ ಆಗುತ್ತದೆ ಎಂದು ಹೇಳಿ ಪಾವತಿಸಿದ ಹಣ 23,71,456 ರೂ. ಹಿಂದಿರುಗಿಸದೆ ವಂಚನೆ ಎಸಗಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.