ಆಳ್ವಾಸ್‌ನಲ್ಲಿ ‘ಶಾಂಭವಿ’ ಕಿರುಚಿತ್ರ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಕೌಟುಂಬಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸಮಾಜಕ್ಕೆ ಕಂಟಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಶ್ರೀಶೈಲ ಪ್ರೊಡಕ್ಷನ್ಸ್ ಅವರ ಮಹಿಳೆಯಾಧಾರಿತ ಕಿರುಚಿತ್ರ ‘ಶಾಂಭವಿ’ ಲೋಕಾರ್ಪಣೆ ಗೈದು ಮಾತನಾಡಿದ ಅವರು, ನಾಗರಿಕತೆಯ ಉಗಮವಾದ ದಿನಗಳಿಂದಲೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯವಾಗುತ್ತಿರುವುದು ಶೋಚನೀಯ. ಕುಟುಂಬ ಹಾಗೂ ಉದ್ಯೋಗ ಕ್ಷೇತ್ರದ ವಿವಿಧ ಸನ್ನಿವೇಶಗಳಲ್ಲಿ ಸ್ತ್ರೀಯರು ಅವಕಾಶ ವಂಚಿತರಾಗುವುದರ ಜತೆಗೆ ಶೋಷಣೆಗೂ ಒಳಗಾಗುತ್ತಿದ್ದಾರೆ. ವಿದ್ಯಾವಂತರಿದ್ದರೂ ಕೌಟುಂಬಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ ಇವೆಲ್ಲವನ್ನೂ ವಿರೋಧಿಸುವ ಹಾಗೂ ಹೋರಾಡುವ ಮನೋಸ್ಥಿತಿ ಮಹಿಳೆಯರಲ್ಲಿ ಬೆಳೆಯಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಿರುಚಿತ್ರದ ನಿರ್ಮಾಪಕ ಡಾ. ರಾಜೇಶ್ ಪೂಜಾರಿ ಮಾತನಾಡಿ, ಪ್ರತಿಯೊಂದು ಕುಟುಂಬದ ಯಶಸ್ಸಿನಲ್ಲಿ ಪುರುಷ ಹಾಗೂ ಮಹಿಳೆ ಸಮಾನ ಜವಾಬ್ದಾರಿ ಹೊಂದಿರುತ್ತಾರೆ. ಪುರುರು ಪ್ರತಿಯೊಂದು ಸ್ತ್ರೀಯನ್ನು ಗೌರವಿಸುವುದರೊಂದಿಗೆ ಅವರ ಮಾನಸಿಕ ಶಕ್ತಿಯಾಗಿರಬೇಕು. ಈ ನಿಟ್ಟಿನಲ್ಲಿ ಶಾಂಭವಿ ಕಿರುಚಿತ್ರವು ಮಹಿಳೆಯರ ಮೇಲಿನ ಶೋಷಣೆಯ ವಿರುದ್ಧ ಧ್ವನಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರಂಗಕರ್ಮಿ ರಮೇಶ್ ರೈ ಕುಕ್ಕುವಳ್ಳಿ, ಉದ್ಯಮಿ ಶ್ರೀಪತಿ ಭಟ್, ಪುತ್ತೂರಿನ ನೋಟರಿ ವಕೀಲ ಜಗನ್ನಾಥ್ ಶೆಟ್ಟಿ, ಕಿರುಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ವಿಜಯ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಬೇಬಿ ಕುಂದರ್ ಉಪಸ್ಥಿತರಿದ್ದರು. ಶೈಲಜಾ ರಾಜೇಶ್ ಸ್ವಾಗತಿಸಿದರು, ಸಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

3 × 4 =