ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಆಳ್ವಾಸ್ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ 2020ನೇ ಸಾಲಿನ ವಿದ್ಯಾರ್ಥಿ ಬ್ಯಾಚ್ ಉದ್ಘಾಟನೆ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಐಸಕ್ ವಾಸ್, ಒಂದು ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಪ್ರತಿಯೊಬ್ಬರು ಗಮನಿಸಬೇಕು. ತಿಳಿಯದ ವಿಷಯಗಳನ್ನು ಇನ್ನೊಬ್ಬರಿಂದ ತಿಳಿದುಕೊಳ್ಳಬೇಕು .ಪ್ರಶ್ನಿಸುವ ಸಾಮರ್ಥ್ಯವನ್ನು ಪ್ರತಿಯೊಬ್ಬರು ಕರಗತ ಮಾಡಿಕೊಳ್ಳಬೇಕು. ಮನುಷ್ಯ ಬಡವನಿದ್ದಾನೆ ಎಂದರೆ ಅವನಲ್ಲಿ ಕೊರತೆ ಇದೆ ಎಂಬ ಅರ್ಥವಲ್ಲ ಬಡತನವನ್ನು ಪ್ರಯೋಜನ ಎಂದುಕೊಂಡು ಮುನ್ನಡೆಯುವುದು ಒಬ್ಬ ಆದರ್ಶ ವ್ಯಕ್ತಿಯ ಲಕ್ಷಣ. ಒಬ್ಬ ಪರಿಪೂರ್ಣ ವ್ಯಕ್ತಿ ತನ್ನಲ್ಲಿರುವ ಜ್ಞಾನವನ್ನು ಸಮಾಜಕ್ಕೆ ಧಾರೆ ಎರೆಯಬೇಕು. ಇದರಿಂದ ಮುಂದಿನ ಪೀಳಿಗೆಗೆ ಸಹಾಯವಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಪದವಿಗಳನ್ನು ಮುಗಿಸಿದ ತಕ್ಷಣ ಉದ್ಯೋಗ ದೊರಕುವುದು ಎಂಬ ಭ್ರಮೆಯಿಂದ ಹೊರಬರುವುದು ಅಗತ್ಯ. ಅನುಭವ ಇಲ್ಲದೇ ಪದವಿಗಳ ಪ್ರಯೋಜನವೇನು? ಪ್ರತಿನಿತ್ಯ ಕೆಲಸವನ್ನು ಮಾಡಬೇಕು, ತಮ್ಮನ್ನು ತಾವು ತೊಡಗಿಸಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿರಬೇಕು. ಜೀವನದಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಗುರಿ ಸಾಧನೆಯತ್ತ ಗಮನ ಕೊಡಬೇಕು ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಕ್ಲೆವಿನ್ ಪೀರೆರಾ ಹಾಗೂ ರೋಲ್ವಿನ್ ಕಾರ‍್ಲೋ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಅನುಭವವನ್ನು ಹಂಚಿಕೊಂಡರು. ವಿಭಾಗದ ಮುಖ್ಯಸ್ಥೆ ಕ್ಲಾರೇಟ್ ಮೆಂಡೋನ್ಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ನೀರಜ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.