ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ನಡೆದ ಅಂತರ ವಿಭಾಗ ಮಟ್ಟದ 2 ದಿನಗಳ ಟೆಕ್ ಸ್ಪರ್ಧೆ ‘ವಾರ್‌ಟೆಕ್ಸೊ’ ಕಾರ್ಯಕ್ರಮ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಟೆಕ್ ಸಿಸ್ಟಮ್ ಗ್ಲೋಬಲ್ ಸರ್ವೀಸ್‌ನ ನಿರ್ದೇಶಕ ಶ್ರೀವತ್ಸ ನಾಗರಾಜಯ್ಯ, ಕಾಲೇಜು ವಾತಾವರಣದಲ್ಲಿ ಕಲಿತಂತಹ ವಿಚಾರಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳದೇ ಹೋದರೆ ಕಲಿತ ವಿಷಯಗಳ ಸದ್ಬಳಕೆ ಸಾಧ್ಯವಿಲ್ಲ. ಅವಕಾಶಗಳನ್ನು ಬಳಸಿಕೊಂಡಾಗ ಮಾತ್ರ ಇತರರಿಂದ ಹೇಗೆ ಭಿನ್ನವಾಗಿ ಕಾಣುತ್ತೇವೆ ಎನ್ನುವುದರ ಅರಿವಾಗುತ್ತದೆ ಎಂದು ಹೇಳಿದರು.
ಯುದ್ಧದ ಮೊದಲು ಶಸ್ತ್ರಾಸ್ತ್ರಗಳ ಅಭ್ಯಾಸ ಎಷ್ಟು ಅಗತ್ಯವೋ, ಹಾಗೆಯೇ ಯಾವುದೇ ಕೆಲಸದ ಫಲಿತಾಂಶ ಉತ್ತಮವಾಗಬೇಕಾದರೆ ಅದಕ್ಕೆ ಪೂರಕವಾದ ತಯಾರಿ ಮುಖ್ಯವಾಗುತ್ತದೆ. ಕಲಿತ ವಿಷಯಗಳನ್ನು ಜ್ಞಾನವನ್ನಾಗಿ ಪರಿವರ್ತಿಸುವುದು ನಮ್ಮ ಕೈಯಲ್ಲೇ ಇದೆ. ಆದ್ದರಿಂದ ಪ್ರತಿಯೊಬ್ಬರು ವಿಭಿನ್ನ ಯೋಚನೆಗಳಿಂದ ಸದಾ ಕ್ರಿಯಾಶೀಲರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಕೊರೊನಾ ಸಮಸ್ಯೆಗಳ ನಡುವೆ ಕಾಲೇಜುಗಳನ್ನು ತೆರೆದು ಚಟುವಟಿಕೆಗಳನ್ನು ನಡೆಸುವುದು ಸಂಸ್ಥೆಗೆ ಒಂದು ರೀತಿಯ ಸವಾಲೇ ಆಗಿತ್ತು, ಆದರೆ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ, ಕಾಲೇಜಿನಲ್ಲಿ ಇಂತಹ ಕಾರ‍್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಯಿತು ಎಂದರು.
ವಿವಿಧ ವಿಭಾಗಗಳಲ್ಲಿ9 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ನಾಳೆ ನಡೆಯಲಿರುವ ಬಹುಮಾನ ವಿತರಣಾ ಸಮಾರಂಭದಲ್ಲಿ ನಗದು ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್, ವಿಭಾಗ ಮುಖ್ಯಸ್ಥ ಮಂಜುನಾಥ್ ಕೊಠಾರಿ, ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕ ಹೇಮಂತ್ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ರಕ್ಷಾ ಸ್ವಾಗತಿಸಿದರು, ರೋಶ್ನಿ ವಂದಿಸಿದರು. ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.