ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸೃಷ್ಟಿ ಹಾಗೂ ಚರ್ಪ್ ಕ್ಲಬ್ ವತಿಯಿಂದ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಹಾಗೂ ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಭಾಗವಾಗಿರುವ ‘ಯಂಗ್ ಇಂಡಿಯನ್ಸ್’ ಸಹಯೋಗದಲ್ಲಿ ‘ಸಸಿಹಿತ್ಲು ಮಂತ್ರ ಬೀಚ್ ಸ್ವಚ್ಛತಾ ಕಾರ್ಯಕ್ರಮ’ ಹಮ್ಮಿಕೊಳ್ಳಲಾಯಿತು. ಸುಮಾರು104 ಚೀಲಗಳಲ್ಲಿ ಸುಮಾರು 1.5 ಟನ್ ಕಸವನ್ನು ಸ್ವಚ್ಛಗೊಳಿಸಿ ಬೈಕಂಪಾಡಿ ಕಸ ಪುನರ್ವಿಲೇವಾರಿ ಘಟಕಕ್ಕೆ ನೀಡಲಾಯಿತು.
ಸ್ವಚ್ಛತೆಯಲ್ಲಿ ಸೃಷ್ಟಿ ಹಾಗೂ ಚರ್ಪ್ ಕ್ಲಬ್‌ನ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಶನ್ ನಿರ್ದೇಶಕ ಗೌರವ್ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಸೃಷ್ಟಿ ಹಾಗೂ ಚರ್ಪ್ ಕ್ಲಬ್ ಸಂಯೋಜಕರು, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜನರ ಬೇಜವಬ್ದಾರಿಯಿಂದ ಪ್ಲಾಸ್ಟಿಕ್, ರಬ್ಬರ್, ಔಷಧೀಯ ತ್ಯಾಜ್ಯ, ಫೋಮ್, ಮದ್ಯದ ಬಾಟಲಿಗಳು ಸೇರಿದಂತೆ ಅನೇಕ ವಿಷಕಾರಿ ವಸ್ತುಗಳು ನದಿಯ ಒಡಲು ಸೇರಿ ಸಮುದ್ರದ ಮೂಲಕ ದಡದಲ್ಲಿ ಶೇಖರಣೆಗೊಳ್ಳುತ್ತಿವೆ. ಇದರಿಂದ ಹೆಜಮಾಡಿ ಕೋಡಿಯಂತಹ ಅಳಿವೆ ಪ್ರದೇಶಗಳ ಜಲಮೂಲ ಸಸ್ಯಗಳು, ಜಲಚರಗಳು ನಾಶವಾಗುತ್ತಿವೆ. ಇದು ಪರಿಸರ ವ್ಯವಸ್ಥೆಯ ಅಸಮತೋಲನಕ್ಕೆ ಕಾರಣವಾಗಿ ಮನುಕುಲಕ್ಕೆ ಅಪಾಯವನ್ನು ತಂದೊಡ್ಡಬಲ್ಲದು. ಆದ್ದರಿಂದ ಜನರಲ್ಲಿ ಈ ಕುರಿತು ಜಾಗೃತಿ ಅಗತ್ಯ, ಈ ನಿಟ್ಟಿನಲ್ಲಿ ನದಿ ಸಂಕುಲದ ಉಳಿವಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮುಂದಿನ ದಿನಗಳಲ್ಲಿ 7ರಿಂದ 8 ಬಾರಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು – ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ