ಆಸ್ಟ್ರೇಲಿಯಾದಲ್ಲಿ ಮಿಂಚು ಹರಿಸಿದ ಕುಂದಾಪ್ರದ್ ಕುವರಿ

Call us

Call us

Shilpa Hegde austrilla

Call us

Call us

Visit Now

ಕುಂದಾಪುರ: ಆಸ್ಟ್ರೇಲಿಯಾದಲ್ಲಿ ಸೆ. 7ರಂದು ನಡೆಯಲಿರುವ ಸಂಸತ್ ಚುನಾವಣೆಗೆ ಲಿಬರಲ್ ಪಕ್ಷದ ವತಿಯಿಂದ ಸ್ಪರ್ಧಿಸುತ್ತಿರುವ ಮೊದಲ ಕನ್ನಡತಿ ಶಿಲ್ಪಾ ಹೆಗ್ಡೆ (36)ಯ ತವರೂರು ವಡ್ಡರ್ಸೆಯಲ್ಲಿ ಸಂಭ್ರಮ ಮನೆ ಮಾಡಿದೆ. ಶಿಲ್ಪಾ ಹೆಗ್ಡೆಯ ಅಜ್ಜಿ ಪ್ರೇಮಲತಾ ಹೆಗ್ಡೆ (80) ಅವರ ಮೊಮ್ಮಗಳ ಸಾಧನೆ ಖುಷಿ ಯಿಂದ ಇದ್ದಾರೆ.

Click here

Call us

Call us

ಪ್ರೇಮಲತಾ ಅವರ ಪತಿ ಡಾ. ಎಂ. ಆರ್. ಹೆಗ್ಡೆ ಪೆರ್ಡೂರಿನ ಜನಪ್ರಿಯ ವೈದ್ಯರು. ಶಿಲ್ಪಾ ಹೆಗ್ಡೆ ಪ್ರೇಮಲತಾ ಹೆಗ್ಡೆಯವರ ಮಗಳು ಶಶಿಕಲಾ ಮತ್ತು ಮೋಹನ್‌ದಾಸ್ ಹೆಗ್ಡೆಯವರ ಕುಡಿ. ಶಿಲ್ಪಾ ಜನಿಸಿದ್ದು ಮಣಿಪಾಲ ಕೆಎಂಸಿ ಯಲ್ಲಿ. ತಂದೆ ಮೋಹನ್‌ದಾಸ್ ಹೆಗ್ಡೆ ಉದ್ಯೋಗದ ಹಿನ್ನೆಲೆಯಲ್ಲಿ ಶಿಲ್ಪಾ ಹೆಗ್ಡೆ 1ರಿಂದ 4ನೇ ತರಗತಿ ಶಿಕ್ಷಣವನ್ನು ಕುವೈಟ್‌ನಲ್ಲಿ ಪಡೆದರು. ಮರಳಿ ಹುಟ್ಟೂರಿಗೆ ಹೆತ್ತವರೊಂದಿಗೆ ಆಗಮಿಸಿದ ಅವರು ಅಜ್ಜನ ಮನೆ ಪೆರ್ಡೂರಿನಲ್ಲಿ ವಿದ್ಯೆ ಮುಂದುವರಿಸಿದರು. 5ರಿಂದ 7ನೇ ತರಗತಿ ಶಿಕ್ಷಣವನ್ನು ಮಣಿಪಾಲದ ಮಾಧವಕೃಪಾ, ಹೈಸ್ಕೂಲ್ ಹಾಗೂ ಪಿಯುಸಿ ಶಿಕ್ಷಣವನ್ನು ಎಂಜಿಸಿಯಲ್ಲಿ ಪಡೆದರು. ನಂತರ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದರು.

ಶಿಲ್ಪಾ ಬಾಲ್ಯವನ್ನು ಅಜ್ಜಿಯ ತೆಕ್ಕೆಯಲ್ಲಿ ಕಳೆದವರು. 3 ವರ್ಷದ ಮಗುವಿರು ವರೆಗೂ ಅಜ್ಜಿಯ ಲಾಲನೆ ಪಾಲನೆಯಲ್ಲಿ ಇದ್ದ ಕಾರಣ ಅಜ್ಜಿಗೆ ಶಿಲ್ಪಾ ಬಗ್ಗೆ ಎಲ್ಲಿಲ್ಲದ ಪ್ರೀತಿ. ‘ಆಕೆ ಚಿಕ್ಕಂದಿನಿಂದಲೂ ಬಲು ಚೂಟಿ, ಶಾಲಾ ದಿನಗಳಲ್ಲೂ ತುಂಬಾ ಆ್ಯಕ್ಟಿವ್ ಆಗಿದ್ದಳು. ನಿಜಕ್ಕೂ ಆಕೆಯ ಸಾಧನೆ ಖುಶಿ ಕೊಟ್ಟಿದೆ. ಆಸ್ಪ್ರೇಲಿಯಾದಲ್ಲಿ ಸಂಸತ್ ಚುನಾವಣೆಗೆ ಟಿಕೇಟ್ ಗಿಟ್ಟಿಸಿರುವುದೇ ದೊಡ್ಡ ಸಾಧನೆ’ಎಂದು ಅಜ್ಜಿ ನುಡಿದಿದ್ದಾರೆ. ಇದೀಗ ಉಡುಪಿ ಜಿಲ್ಲೆಯ ಪೆರ್ಡೂರಿ ನಲ್ಲಿ ಇರುವ ಮೋಹನ್‌ದಾಸ್ ಹೆಗ್ಡೆ, ಶಶಿಕಲಾ ಹೆಗ್ಡೆ ಕುಟುಂಬವು ಖ್ಯಾತ ಪತ್ರಕರ್ತ ದಿ. ವಡ್ಡರ್ಸೆ ರಘುರಾಮ ಶೆಟ್ಟಿರ ಕುಟುಂಬದವರಾಗಿದ್ದಾರೆ. ಶಿಲ್ಪಾ ಬಾಲ್ಯದಿಂದಲೇ ಅನ್ಯರ ಕಷ್ಟಗಳಿಗೆ ಸ್ಪಂದಿಸುವ ಸಹೃದಯಿ. ಬಾಲ್ಯದಲ್ಲಿ ಎಂಜಿನಿಯರ್ ಆಗಬೇಕೆನ್ನುವ ಆಸೆ ಈಕೆಯದ್ದಾದರೆ, ಅಜ್ಜನಿಗೆ ಮಾತ್ರ ಈಕೆ ತನ್ನಂತೆಯೇ ವೈದ್ಯೆಯಾಗಬೇಕೆನ್ನುವ ಕನಸಿತ್ತು. ತಮ್ಮ ಸಹಾನ್ ಹೆಗ್ಡೆ ಬೆಂಗಳೂರಿನಲ್ಲಿ ಉದ್ಯೋಗಿ, ತಂಗಿ ಸುಷ್ಮಾ ಹೆಗ್ಡೆ ಡಾ. ರಕ್ಷಿತ್ ಶೆಟ್ಟಿಯವರನ್ನು ವಿವಾಹವಾಗಿ ಕುವೈಟ್‌ನಲ್ಲಿದ್ದಾರೆ. ತಂದೆ ಮೋಹನದಾಸ್ ಹೆಗ್ಡೆ ವಾಣಿಜ್ಯ ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ, ತಾಯಿ ಗೃಹಿಣಿ.

2001ರಲ್ಲಿ ಕುಂದಾಪುರ ತಾಲೂಕಿನ ತೆಗ್ಗುಂಜೆ ಆಜ್ರಿಯ ದಯಾನಂದ ಶೆಟ್ಟಿಯವರನ್ನು ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದವರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ದಯಾನಂದ ಶೆಟ್ಟಿ ಆಸ್ಟ್ರೇಲಿಯಾದಲ್ಲಿ ಸಾಪ್ಟವೇರ್ ಎಂಜಿನಿಯರ್. ಇಬ್ಬರು ಅಲ್ಲಿನ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾದವರು. ಇದೀಗ ಅಲ್ಲಿನ ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಸಂಸತ್ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಿಲ್ಪಾ ಕರ್ನಾಟಕದ ಹೆಮ್ಮೆಯನ್ನು ಪಸರಿಸಿದ್ದಾರೆ. 1997ರಿಂದ ಆಸ್ಟ್ರೇಲಿಯಾದಲ್ಲಿರುವ ದಯಾನಂದ ಶೆಟ್ಟಿ ಆರು ವರ್ಷಗಳ ಹಿಂದೆ ಲಿಬರಲ್ ಪಕ್ಷದ ಸಕ್ರಿಯ ಸದಸ್ಯರಾದರು, ಪಕ್ಷದೊಳಗಿನ ಹುದ್ದೆಗೆ ನಡೆದ ಚುನಾವಣೆಯಲ್ಲೂ ಸ್ಪರ್ಧಿಸಿ ಗೆದ್ದರು. ಪತಿಗೆ ಸಾಥಿಯಾದ ಶಿಲ್ಪಾ ತನ್ನ ಮಾತು, ಭಾಷಣದಿಂದ ಎಲ್ಲರ ಮನ ಗೆದ್ದಿದ್ದಾರೆ.

ವಡ್ಡರ್ಸೆ ಪ್ರೇಮಲತಾ ಹೆಗ್ಡೆ ಮತ್ತು ಡಾ.ಎಂ.ಆರ್.ಹೆಗ್ಡೆ ದಂಪತಿಯ ಕುಟುಂಬವು ಸಾಮಾಜಿಕ ಕಾರ್ಯದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದು, ಅಜ್ಜ, ಅಜ್ಜಿ ಮತ್ತು ಕುಟುಂಬಿಕರ ಸಮಾಜಿಕ ಗುಣ ಮೊಮ್ಮಗಳಿಗೂ ಬಂದಿದೆ ಅನ್ನುವುದು ಊರವರ ಅಭಿಪ್ರಾಯ.

ಪೆರ್ಡೂರಿನಲ್ಲೂ ಖುಷಿ: ಶಿಲ್ಪಾ ತಂದೆ ತಾಯಿ ಇರುವ ಉಡುಪಿ ತಾಲೂಕು ಪೆರ್ಡೂರಿನಲ್ಲೂ ಎಲ್ಲಿಲ್ಲದ ಸಂಬ್ರಮ. ಪೆರ್ಡೂರಿನ ಮನೆಗೆ ನಿತ್ಯ, ಪುರುಸೊತ್ತಿದ್ದಾಗ ಶಿಲ್ಪಾ ದೂರವಾಣಿ ಕರೆಯನ್ನೂ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಷ್ಟೇ ಊರಿಗೆ ಪತಿ ದಯಾನಂದ ಶೆಟ್ಟಿ ಹಾಗೂ ಮಕ್ಕಳಾದ ನಿಹಾಲ್ (10), ಸಾಹಿಲ್ (8) ಜತೆ ಬಂದಿದ್ದ ಶಿಲ್ಪಾ ಮತ್ತೆ ಡಿಸೆಂಬರ್‌ನಲ್ಲಿ ಬರಲಿದ್ದಾರೆ. ಶಾಲೆಗೆ ಹೋಗಿ ಬಂದಾಗ, ಮನೆ ಯಲ್ಲಿದ್ದಾಗ ನಿತ್ಯ ಸಂಜೆ ಊರ ದೇವರು ಪದ್ಮನಾಭನ ದರ್ಶನ ತಪ್ಪಿಸಿ ದವಳಲ್ಲ ಎಂದು ಶಿಲ್ಪಾ ತಂದೆ ಮೋಹನ್ ದಾಸ್ ಹೆಗ್ಡೆ ಹಾಗೂ ಶಶಿಕಲಾ ಹೇಳುತ್ತಾರೆ.

ಹೆತ್ತವರ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಯಾವುದೇ ಒತ್ತಡ, ಪ್ರಭಾವ, ಹಣದ ಕಾರುಬಾರಿಲ್ಲ. ಟಿಕೆಟ್, ಪ್ರಚಾರಕ್ಕೆ ಖರ್ಚು ಮಾಡಬೇಕೆಂದಿಲ್ಲ. ಪ್ರಚಾರದ ಅಬ್ಬರವೂ ಇಲ್ಲ. ಮತದಾನ ಮಾಡಲೇಬೇಕು, ಇಲ್ಲದಿದ್ದರೆ 50 ಡಾಲರ್ ದಂಡ ಹಾಕುತ್ತಾರೆ ಎಂದೂ ಲ್ಲಿನ ಚುನಾವಣೆ ಬಗ್ಗೆ ಕೂಡ ವಿವರಿಸಿದರು.
ದೂರವಾಣಿಯಲ್ಲಿ ಮಾತನಾಡಿದ ದಯಾನಂದ ಶೆಟ್ಟಿ ಮತ್ತು ಶಿಲ್ಪಾ ಹೆಗ್ಡೆ ದಂಪತಿ ಆಸ್ಟ್ರೇಲಿಯಾದಲ್ಲಿ ಕಳೆದ 10 ವರ್ಷಗಳಿಂದ ನೆಲೆದ್ದರೂ ಕನ್ನಡ ಭಾಷೆ ಅದರಲ್ಲೂ ಕುಂದಾಪ್ರ ಕನ್ನಡದ ಸೊಗಡು ಮರೆಯದಿರುವುದು ವಿಶೇಷತೆಯಾಗಿತ್ತು. ನಡುವೆ ಇಂಗ್ಲೀಷ್ ನುಸುಳಿದರೂ ಕುಂದಾಪ್ರ ಕನ್ನಡದ ಸೊಗಡು ಮಾತ್ರ ಅಳಿಸಿಹೋಗದಿರುವುದು ಕಂಡುಬಂತು.

‘ಕಳೆದ 10 ವರ್ಷಗಳಿಂದ ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿಯಲ್ಲಿ ನಾನು ಸಕ್ರೀಯ ಸದಸ್ಯ. ಬಳಿಕ ಎಕ್ಸಿಕ್ಯೂಟಿವ್ ಮೆಂಬರ್ ಆದೆ. ನನ್ನೊಂದಿಗೆ ಪತ್ನಿ ಶಿಲ್ಪಾ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾದರು ”ಎಂದು ಶಿಲ್ಪಾ ಪತಿ ದಯಾನಂದ ಶೆಟಿ ಹೇಳುತ್ತಾರೆ. ಆಸ್ಟ್ರೇಲಿಯಾದಲ್ಲಿ ಬಹಳ ಮುಖ್ಯವಾಗಿ ಚಾರಿಟಿ ಸೇವೆ ಬಹು ದೊಡ್ಡ ರೀತಿಯಲ್ಲಿ ನಡೆಯುತ್ತಿದೆ. ಶಿಲ್ಪಾ ಸೇವೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದವರು. ಇಲ್ಲಿ ದೊಡ್ಡ ಮಟ್ಟದ ಚಾರಿಟಿ ಸೇವೆಯಲ್ಲಿ ಪಾಲ್ಗೊಂಡ ಶಿಲ್ಪಾ ಸಹಜವಾಗಿ ಲಿಬರಲ್ ಪಾರ್ಟಿಯ ಮುಖಂಡರ ಗಮನಸೆಳೆದವರು ಎಂದು ಹೇಳಿದ ಹೇಳುವ ದಯಾನಂದ ಶೆಟ್ಟಿ, ಸ್ವತಃ ತಾನು ಕೂಡ ಪಕ್ಷದ ಪ್ರಮುಖ ಹುದ್ದೆಯಲ್ಲಿರುವುದು ಆಕೆಗೆ ಸಹಕಾರ ನೀಡಿದೆ. ಆಕೆಯ ಸಮಾಜಸೇವೆ, ನಾಯಕತ್ವ ಗುಣ ಗುರುತಿಸಿ ಪಕ್ಷ ಟಿಕೇಟ್ ನೀಡಿದ್ದು, ಗೆಲ್ಲುವ ಎಲ್ಲಾ ಲಕ್ಷಣ ತೋರಿಬಂದಿದೆ ಎಂದು ಹೇಳಿದ್ದಾರೆ.

*ನಮ್ಮ ಭಾಷೆ ಮರ್ತ್‌ ಹೋತಿಲ್ಲಾ ಕಾಣಿ. ಭಾರತ, ಅದರಲ್ಲೂ ಕನ್ನಡನಾಡಿನ ನನ್ನ ಹಿತೆಷಿಗಳ, ಬಂಧುಗಳ ಕರೆ ನನ್ನಲ್ಲಿ ಹೊಸ ಹುಮ್ಮುಸ್ಸು ತಂದಿದೆ.
-ಶಿಲ್ಪಾ ಹೆಗ್ಡೆ

*ಶಾಲಾ ದಿನದಿಂದಲೂ ಆಕೆಯಲ್ಲಿ ಸೇವಾ ಮನೋಭಾವವಿತ್ತು. ಸೇವಾ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡವಳು. ಆಸ್ಟ್ರೇಲಿಯಾಕ್ಕೆ ಹೋದ ಮೇಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವಳು. ಅವಳಿಗೆ ಟಿಕೆಟ್ ಸಿಕ್ಕಿರುವುದೇ ಬಹು ದೊಡ್ಡ ಗೌರವ. ನಮಗೆಲ್ಲರಿಗೂ ಬಹಳ ಹೆಮ್ಮೆಯಾಗಿದೆ.
– ಸದಾಶಿವ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ (ಅಜ್ಜಿ ಪ್ರೇಮಲತಾ ಹೆಗ್ಡೆಯವರ ಸಹೋದರ).

*ಆಸ್ಟ್ರೇಲಿಯಾ ನೆಲದ ರಾಜಕೀಯದಲ್ಲಿ ಭಾರತೀಯರಿಗೆ ಅದರಲ್ಲೂ ಮಹಿಳೆಗೆ ರಾಜಕೀಯ ಅವಕಾಶ, ಚುನಾವಣಾ ಸ್ಪರ್ಧೆಗೆ ಟಿಕೆಟ್ ಸಿಕ್ಕಿದ್ದು ಹೆಮ್ಮೆ ತಂದಿದೆ. ಗೆಲುವು, ಸೋಲು ಎಲ್ಲ ಅದೃಷ್ಟ, ದೇವರ ದಯೆ. ಊರಿನ ಜನರಿಗಂತೂ ಆಕೆಯ ಸಾಧನೆ ಖುಷಿ ಕೊಟ್ಟಿದೆ.
-ಮೋಹನ್‌ದಾಸ್ ಹೆಗ್ಡೆ, ಪೆರ್ಡೂರು (ಶಿಲ್ಪಾ ತಂದೆ)

*ಅಜ್ಜನ ಚುರುಕು, ಗುಣ ಮೊಮ್ಮಗಳಲ್ಲಿದೆ. ಆಕೆ ಗೆದ್ದು ಬಂದರೆ ಊರಿನಲ್ಲೂ ಸೇವಾ ಯೋಜನೆ ಕೈಗೆತ್ತಿಕೊಳ್ಳಲು ಹೇಳುವೆ. ಊರಿಗೆ ಬಂದಾಗ ಪತಿ ಮತ್ತು ಪತ್ನಿ ಕುಟುಂಬಕ್ಕೆ, ಬಡವರಿಗೆ ನೆರವಾಗುತ್ತಿದ್ದಾರೆ. ಆಸ್ಟ್ರೇಲಿಯಾ ದಲ್ಲೂ ಸಮಾಜ ಸೇವೆ ನಿರತಳಾಗಿದ್ದಾಳೆ. ಬಾಲ್ಯದಿಂದಲೇ ಆಕೆಯಲ್ಲಿ ನಾಯಕತ್ವ ಗುಣವಿತ್ತು.
-ಶಶಿಕಲಾ ಹೆಗ್ಡೆ, ಪೆರ್ಡೂರು(ಶಿಲ್ಪಾ ತಾಯಿ)

*ನನ್ನಲ್ಲೇನೂ ಹೇಳದೆ, ಕೇಳದೆ ಮೊನ್ನೆ ಹೈದರಾಬಾದಿಗೆ ಹೋಗೋಣ ಅಜ್ಜ, ಏರ್ ಟಿಕೆಟ್ ತಂದಿದ್ದೇನೆಂದಳು, ಹೋದೆ. ಆಸ್ಟ್ರೇಲಿಯಾದ ಪ್ರಮುಖ ರಾಜಕಾರಣಿಗಳ ಪರಿಚಯ ಆಕೆಗಾಗಿದೆ. ಉತ್ತಮ ಭಾಷಣ ಮಾಡುತ್ತಾಳೆ. ಲಿಬರಲ್ ಪಾರ್ಟಿ ಮನವಿಯಂತೆ ಆಕೆ ಸ್ಪರ್ಧಿಸಿದ್ದಾಳೆ, ಗೆದ್ದು ಬರುತ್ತಾಳೆ.
-ಡಾ. ಎಂ. ಆರ್. ಹೆಗ್ಡೆ, ಪೆರ್ಡೂರು(ಶಿಲ್ಪಾ ಹೆಗ್ಡೆ ಅಜ್ಜ)

*ಇಲ್ಲೇ ಹುಟ್ಟಿ ಬೆಳೆದ ನನ್ನ ಮತ್ತು ಡಾ. ಹೆಗ್ಡೆ ಕುಟುಂಬಕ್ಕೆ ಆತ್ಮೀಯ ಒಡನಾಟ. ಶಿಲ್ಪಾ ಹೆಗ್ಡೆ ಪೆರ್ಡೂರಿನ ಹೆಮ್ಮೆ. ಅಜ್ಜನಂತೆ ಚುರುಕು ವ್ಯಕ್ತಿತ್ವ . ಭಾರತದ ಕೀರ್ತಿ ಪತಾಕೆ ಹಾರಿಸಲಿ, ದೇವರು ಒಳ್ಳೇದು ಮಾಡಲಿ.
-ಪದ್ಮನಾಭ ಹೆಬ್ಬಾರ್ ಪೆರ್ಡೂರು, ಪ್ರಸಾದ್ ಸೌಂಡ್ ಸಿಸ್ಟಮ್ಸ್.

Leave a Reply

Your email address will not be published. Required fields are marked *

thirteen − four =