ಕುಂದಾಪುರ: ಇಲ್ಲಿನ 150ರಿಂದ 200 ಸಮಾನ ಮನಸ್ಕರು ಸೇರಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸೇರಿ ಕುಂದಾಪುರ ಮಿತ್ರರು ಎನ್ನುವ ವೇದಿಕೆಯನ್ನು ನಿರ್ಮಿಸಿಕೊಂಡಿದ್ದು, ಇದರ ಉದ್ಘಾಟನೆ ಆ.22ರಂದು ಸಂಜೆ 4:30ಕ್ಕೆ ಕುಂದಾಪುರದ ಪಾರಿಜಾತ ಹೋಟೆಲ್ನ ಸ್ನೇಹಾ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಕಲಾವಿದರು, ಸಾಹಿತಿಗಳೂ ಆದ ಕೆ,ಕೆ ಕಾಳಾವರ್ಕರ್ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ ಎಂದು ಕುಂದಾಪುರ ಮಿತ್ರರು ವೇದಿಕೆಯ ಕಾರ್ಯಾಧ್ಯಕ್ಷ ರಾಮದಾಸ ನಾಯಕ್ ಹೇಳಿದರು
ಕುಂದಾಪುರದ ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ವಿಶಿಷ್ಠವಾದ ವೇದಿಕೆಯಾಗಿದ್ದು, ಸಾಮಾಜಿಕವಾಗಿ ಸಮಾಜದ ಅಪೇಕ್ಷಿತ ವರ್ಗದವರಿಗೆ ಸೇವೆಯನ್ನು ನೀಡುವುದು, ವೇದಿಕೆಯ ಸದಸ್ಯರು ಹಾಗೂ ಕುಟುಂಬದವರು ನೀಡಲು ಇಚ್ಛಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಆಯೋಜಿಸುವುದು, ಸ್ಥಳೀಯ ಉತ್ಸಾಹಿ ಪ್ರತಿಭೆಗಳಿಗೆ ಅವಕಾಶ ನೀಡುವುದು, ಚಿಕ್ಕ ಪುಟ್ಟ ಸಹ ಸಂಸ್ಥೆಗಳನ್ನು ನಡೆಸಲು ಮಾರ್ಗದರ್ಶನ ನೀಡುವುದು, ಕ್ರೀಡಾ ಕಾರ್ಯಕ್ರಮಗಳ ಆಯೋಜನೆ, ಸಾಧಕರ ಸಾಧನೆಯನ್ನು ಗುರುತಿಸುವಿಕೆ, ರಾಷ್ಟ್ರೀಯ ಹಬ್ಬಗಳನ್ನು ಸಾರ್ವಜನಿಕವಾಗಿ ಆಯೋಜಿಸುವುದು ಮೊದಲಾದ ಉದ್ದೇಶಗಳನ್ನು ವೇದಿಕೆ ಹೊಂದಿದೆ ಎಂದರು.
ಪರಿಸರದ ಬಹುದಿನಗಳ ಬೇಡಿಕೆಗಳನ್ನು ಸಾಕಾರಗೊಳಿಸಲು ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಕಲಾ ವೇದಿಕೆಯಾಗಿ ಕುಂದಾಪುರ ಮಿತ್ರರು ಮೂಡಿಬರಲಿದ್ದು, ಈಗಾಗಲೇ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಇದೊಂದು ಸಮಾನಮನಸ್ಕರ ಸಂಘಟನೆಯಾಗಿದ್ದು, ರಾಜಕೀಯ ರಹಿತವಾಗಿ ಕೆಲಸ ನಿರ್ವಹಿಸಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ದಿನಕರ ಕೊತ್ವಾಲ್, ಕಾರ್ಯದರ್ಶಿ ಕೆ.ಜಗದೀಶ ಉಪಸ್ಥಿತರಿದ್ದರು.