ಕುಂದಾಪುರ: ಇಂಗ್ಲೀಷ್ ಭಾಷೆ ಬಹುಭಾಷಾ ಸಾಹಿತ್ಯಕ್ಕಿರುವ ದೊಡ್ಡ ಸವಾಲು. ಇಂಗ್ಲಿಷಿನ ವ್ಯಾಮೋಹಕ್ಕೆ ಸಿಕ್ಕಿ ಮಾತೃ ಭಾಷೆಯನ್ನು ಮರೆಯುತ್ತಿದ್ದೇವೆ. ನಮ್ಮ ಸರಕಾರಗಳ ಭಾಷಾ ನಿಲುವು ಹಾಗೂ ಪೋಷಕರಲ್ಲಿನ ಭ್ರಮೆ ಇದಕ್ಕೆ ಮುಖ್ಯ ಕಾರಣ ಎಂದು ಬೆಂಗಳೂರಿನ ಖ್ಯಾತ ಲೇಖಕ ಡಾ| ಓ. ಎಲ್. ನಾಗಭೂಷಣಸ್ವಾಮಿ ಹೇಳಿದರು.
ಅವರು ಭಂಡಾರ್ಕಾರ್ಸ್ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಕೊಯಾಕುಟ್ಟಿ ಸಭಾಂಗಣದಲ್ಲಿ ಆಯೋಸಿದ ಎರಡು ದಿನಗಳ ಯುಜಿಸಿ ಪ್ರಾಯೋಜಿತ ’ಭಾರತೀಯ ಬಹುಭಾಷಾ ಸಾಹಿತ್ಯ’ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಭಾಷೆಗೆ ಮತ್ತೊಂದು ಭಾಷೆ ಶತ್ರುವಲ್ಲ. ಆದರೆ ಒಂದು ಭಾಷೆಯನ್ನಾಡುವ ಜನ ಮತ್ತೊಂದು ಭಾಷೆಗೆ ಶತ್ರುಗಳಾಗಿರುತ್ತಾರೆ ಭಾರತದಂತಹ ದೇಶದಲ್ಲಿ ಬಂಡವಾಳ ಶಾಹಿತ್ವ, ಬಲಪಂಥೀಯ ರಾಜಕೀಯ ಹಾಗೂ ಇಂಗ್ಲಿಷ್ನ ವ್ಯಾಮೋಹವು ಭಾಷಾ ವೈವಿಧ್ಯತೆಯನ್ನು ನಾಶ ಮಾಡಿ ಎಲ್ಲವನ್ನೂ ಏಕತೆಯಿಂದ ನೋಡುವಂತೆ ಮಾಡಿರುವುದು ಬಹುಭಾಷಾ ಸಾಹಿತ್ಯದ ನಾಶಕ್ಕೆ ಕಾರಣವಾಗಿದೆ
ಯುವಜನತೆ ಮಾತೃಭಾಷೆಯಿಂದ ದೂರ ಸರಿಯುತ್ತಿರುವುದು ಹಾಗೂ ಜ್ಞಾನದ ವ್ಯಾಖ್ಯಾನವು ಬದಲಾಗುತ್ತಿರುವುದು ಬಹುಭಾಷಾ ಸಾಹಿತ್ಯಕ್ಕೆ ಎದುರಾಗಿರುವ ದೊಡ್ಡ ವಿಪತ್ತು ಎಂದವರು ವಿಶ್ಲೇಶಿಸಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿ.ವಿಯ ಪ್ರಸಾರಾಂಗ ನಿರ್ದೇಶಕ ಡಾ| ಸಿ. ನಾಗಣ್ಣ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮ ಸಂಯೋಜಕ ಡಾ| ಹಯವದನ ಉಪಾಧ್ಯ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ಶೆಟ್ಟಿ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ| ಪಾರ್ವತಿ ಜಿ. ಐತಾಳ್ ಪ್ರಸ್ತಾವಿಕವಾಗಿ ಮಾತನಾಡಿದರು. ಜವಿಲಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.