ಇಂದಿನ ಸಮಾಜಕ್ಕೆ ಮಹಿಳಾ ಸಂಘಟನೆಗಳು ಅಗತ್ಯ ಮತ್ತು ಅನಿವಾರ್ಯ – ಡಾ. ಶ್ರುತಿ ಕನ್ನಂತ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಶ್ರೀ ಪದ್ಮಾವತಿ ಅಮ್ಮನವರ ಕಲ್ಯಾಣ ಮಂಟಪ ಬೊಳಂಬಳ್ಳಿಯಲ್ಲಿ ‘ಛತ್ರಪತಿ ಯುವ ಸೇನೆ’ ಉಡುಪಿ ಜಿಲ್ಲೆ ಇವರು ಆಯೋಜಿಸಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ‘ಸಡಗರ-2018’, ‘ಅಂಬೇಡ್ಕರ್ ಜಯಂತಿ’ ಆಚರಣೆ ಮತ್ತು ‘ಮಹಿಳಾ ಘಟಕ’ ಉದ್ಘಾಟನಾ ಕಾರ್ಯಕ್ರಮಗಳು ನೆಡೆದವು. ಛತ್ರಪತಿ ಯುವ ಸೇನೆಯ ‘ಮಹಿಳಾ ಘಟಕ’ ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾಲೂಕು ಬಾಲ ಸ್ವಾಸ್ತ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಶ್ರುತಿ ಕನ್ನಂತ, ಸಂಘಟಿತ ಸಮಾಜದ ಉನ್ನತಿಯ ಅಗತ್ಯತೆ, ಅರಿವು, ಕಾರ್ಯ ಮತ್ತು ಕಾರ್ಯಕ್ರಮಗಳು ನೆಡೆದಾಗ ಮಾತ್ರ ಸಾಮಾಜಿಕ ತೊಡಕು ತೊಂದರೆಗಳನ್ನು ನಿವಾರಿಸಿ, ಸಾಂಸ್ಕ್ರತಿಕ ನೆಲೆಯಲ್ಲಿ ಸುಸಂಬದ್ಧ ಜೀವನವನ್ನು ನೆಡೆಸಲು ಸಾಧ್ಯ. ಆ ನೆಲೆಯಲ್ಲಿ ಇಂದಿನ ಸಮಾಜಕ್ಕೆ ಮಹಿಳಾ ಸಂಘಟನೆಗಳು ಅಗತ್ಯ ಮತ್ತು ಅನಿವಾರ್ಯ ಎಂದು ನುಡಿದರು.

ಸಂಘಟನೆಗಳು ಯಶಸ್ವಿಯಾಗಿ ಮುನ್ನಡೆಯಬೇಕಾದರೆ, ಪ್ರತಿ ಸದಸ್ಯರ ಸಕರಾತ್ಮಕ ತೊಡಗುವಿಕೆ ಯೋಜನೆ, ಯೊಚನೆ ಮತ್ತು ಆರ್ಥಿಕ ವಿಚಾರಗಳ ಪಾರದರ್ಶಕತೆ ಮತ್ತು ಸಂಘಟಿತ ಮನೋಭಾವ ಬಹಳ ಅಗತ್ಯವೆಂದು ಸಂಪನ್ಮೂಲ ವ್ಯಕ್ತಿಗಳಾದ ಬಸ್ರೂರು ಶ್ರೀ ಶಾರದ ಕಾಲೇಜಿನ ಉಪನ್ಯಾಸಕರಾದ ಪಾಂಡುರಂಗ ನುಡಿದರು.

ಮರಾಠಿ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಏಳಿಗೆಗೆ ಛತ್ರಪತಿ ಯುವ ಸೇನೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವೆಂದು ಬೈಂದೂರು ಮರಾಠಿ ಸಮಾಜ ಸುಧಾರಕರ ಸಂಘದ ಅಧ್ಯಕ್ಷರಾದ ಬೋಜು ನಾಯ್ಕ ಹೇಳಿದರು. ಎರಡು ದಶಕಗಳ ಹಿಂದೆ ಬಹಳ ಹಿಂದುಳಿದ ಮರಾಠಿ ಸಮುದಾಯ, ಸಂಘಟನೆ ಶಿಕ್ಷಣದಿಂದ ಬೆಳಯುತ್ತಿರುವುದು ಸಮದಾನಕರ ಸಂಗತಿಯೆಂದು ಬೊಳಂಬಳ್ಳಿ ಪದ್ಮಾವತಿ ದೇವಸ್ಥಾನದ ಮೊಕ್ತೆಸರರಾದ ಶ್ರೀ ಧನಂಜಯ ಜೈನ್‌ರವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಛತ್ರಪತಿ ಯುವ ಸೇನೆಯ ಸ್ಥಾಪನಾಧ್ಯಕ್ಷರಾದ ಮಹಾಲಿಂಗ ನಾಯ್ಕ ಜೋಗಿಜಡ್ಡು ವಹಿಸಿದರು. ಛತ್ರಪತಿ ಯುವ ಸೇನೆಯ ಮಹಿಳಾ ಘಟಕದ ಉಪಾಧ್ಯಕ್ಷರಾದ ವಸಂತಿ ಬಸ್ರೀಬೇರು, ಛತ್ರಪತಿ ಯುವ ಸೇನೆ ಉಪಾಧ್ಯಕ್ಷರಾದ ಚಂದ್ರಶೇಖರ ನಾಯ್ಕ ಹರ್ಕೊಡು ಮತ್ತು ಸ್ಥಳೀಯ ಮುಖಂಡರಾದ ಚಂದ್ರ ನಾಯ್ಕ ಮುತ್ತಣ್ಕಿ, ಹೊವಯ್ಯ ನಾಯ್ಕ ಮುತ್ತಣ್ಕಿ, ಪದಾಧಿಕಾರಿಗಳಾದ ರೇವತಿ ಹೊಸುರು, ಶಾರದ ಚಿತ್ತೂರು, ಖಜಾಂಚಿ ನಾಗರಾಜ ನಾಯ್ಕ ಕನ್ಕಿಮಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ 2017-18 ರ ಸಾಲಿನ ಕನ್ನಡ ಮಾದ್ಯಮ ಪ್ರಶಸ್ತಿ ವಿಜೇತ ವಿದ್ಯಾರ್ಥಿ ಕು. ಸಂಗೀತಾರವರಿಗೆ ಸನ್ಮಾನಿಸಲಾಯಿತು ಹಾಗೂ ಛತ್ರಪತಿ ಯುವ ಸೇನೆಯ ಎಲ್ಲಾ ಪದಾಧಿಕಾರಿಗಳನ್ನು ಗುರುತಿಸಲಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮವನ್ನಾಗಿ ಯಕ್ಷಗಾನ ಪ್ರಸಂಗ ರಾಜರುದ್ರಕೊಪ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಸದಾಶಿವ ನಾಯ್ಕ ನಂದಿಗದ್ದೆ ಪ್ರಾಸ್ತವಿಕ ನುಡಿಗಳನ್ನಾಡಿದರು, ರಮೇಶ ನಾಯ್ಕ ಜಡ್ಕಲ್ ಸ್ವಾಗತಿಸಿದರು, ಅಶ್ವಿನಿ ಮತ್ತು ರಘು ನಾಯ್ಕ ಕನ್ಕಿಮಡಿ ಕಾರ್ಯಕ್ರಮ ನಿರೂಪಿಸಿದರು. ರೇವತಿ ಹೊಸೂರು ವಂದಿಸಿದರು.

 

Leave a Reply

Your email address will not be published. Required fields are marked *

one × 5 =