ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಸಾಮರ್ಥ್ಯವೃದ್ಧಿಗೆ ಬೈಂದೂರು ವಲಯದಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಶಾಲೆಗಳ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಪರಿಣತಿ ಹೊಂದಿದ ಮತ್ತು ಬೋಧನಾ ಸಾಧನೆ ಮಾಡಿರುವ ಶಿಕ್ಷಕರಿಂದ ಭಾನುವಾರ ತರಗತಿಗಳನ್ನು ಏರ್ಪಡಿಸಲಾಗುತ್ತಿದೆ. ಅಂತಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಾವುಂದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಶಶಿಕಲಾ ವಿ. ನಾಯಕ್ ಹೇಳಿದರು.
ಅವರು ನಾವುಂದ ಕಾಲೇಜಿನಲ್ಲಿ ಕೋಟೇಶ್ವರ ರೋಟರಿ ಕ್ಲಬ್ ಸಹಯೋಗದಲ್ಲಿ ವಲಯ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವೃದ್ಧಿ ವಿಶೇಷ ತರಗತಿ-ಉತ್ತೇಜನ-2021ಕಾರ್ಯಕ್ರಮ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳು ಪರಿಣತ ಶಿಕ್ಷಕರು ನೀಡುತ್ತಿರುವ ಉಚಿತ ಮಾರ್ಗದರ್ಶನದ ಸಂಪೂರ್ಣ ಲಾಭ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ವಲಯದ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ವಲಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸುಧಾಕರ ನಿರೂಪಿಸಿದರು. ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣಮೂರ್ತಿ, ಗಣಿತ ಬೋಧಕ ಪ್ರಕಾಶ ಶೆಟ್ಟಿ ತಲ್ಲೂರು, ವಿಜ್ಞಾನ ಬೋಧಕ ಸದಾನಂದ ಶೆಟ್ಟಿ ಆಲೂರು, ಸಮಾಜ ವಿಜ್ಞಾನ ಬೋಧಕ ಉದಯಶೆಟ್ಟಿ ಆಲೂರು, ಇಂಗ್ಲಿಷ್ ಬೋಧಕ ಅನಂತ ಆಚಾರಿ ಗುಜ್ಜಾಡಿ ಇದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಭೇಟಿನೀಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು ಮತ್ತು ವಿದ್ಯಾರ್ಥಿಗಳ ಬಗೆಗೆ ಕಾಳಜಿ ವಹಿಸುತ್ತಿರುವ ಶಿಕ್ಷಕರನ್ನು ಅಭಿನಂದಿಸಿದರು.