ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಒತ್ತಿನಣೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಕಟ್ಟೆಯ ಮನೆಯೊಂದಕ್ಕೆ ಜೇಡಿ ಮಣ್ಣು ನುಗ್ಗಿ ವಾಸಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಊಟ ಹಾಗೂ ವಸತಿಯಿಲ್ಲದೇ ಅಂತಂತ್ರರಾಗಿರು ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ, ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಬೈಂದೂರು ವಲಯ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಶ್ರೀಗಣೇಶ್ ಗಾಣಿಗ ಉಪ್ಪುಂದ ಹೇಳಿದರು.
ಅವರು ಒತ್ತಿನಣೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮನೆಯೊಳಕ್ಕೆ ಜೇಡಿಮಣ್ಣು ನುಗ್ಗಿ ಅಂತಂತ್ರರಾಗಿರುವ ಪಾರ್ವತಿ ಶೇಖರ ಶೆಟ್ಟಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಎದುರು ನಡೆದ ಸಭೆಯಲ್ಲಿ ಆಗ್ರಹಿಸಿದರು. ಮಳೆಯಿಂದಾಗಿ ಮಣ್ಣು ಮನೆಯೊಳಕ್ಕೆ ಬಂದು ಕುಳಿತಿದ್ದು ಸುಮಾರು ಐದು ಅಡಿಯಷ್ಟು ಮಣ್ಣು ನಿಂತು ವಾಸಿಸಲಾರದ ಸ್ಥಿತಿ ಬಂದೊದಗಿದೆ. ಆಹಾರ ಸಾಮಾಗ್ರಿಗಳು, ಬಟ್ಟೆ, ಮಕ್ಕಳ ಪುಸ್ತಕವೆಲ್ಲ ಕೆಸರು ಮಣ್ಣಿನಲ್ಲಿ ಮುಳುಗಿ ಹೋಗಿದೆ. ಮಳೆಗಾಲದಲ್ಲಿ ಅವರ ಬದುಕು ಕಷ್ಟದಲ್ಲಿದೆ. ಕೂಡಲೇ ಈ ಅವ್ಯವಸ್ಥೆಗೆ ಕಾರಣವಾದ ಕಂಪೆನಿಯ ಮೂಖಾಂತರ ಪರಿಹಾರ ಒದಗಿಸಿಕೊಟ್ಟು, ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಸೂಕ್ತ ಸ್ಪಂದನ ದೊರೆಯದೇ ಹೋದಲ್ಲಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.
ಮನವಿ ಸ್ವೀಕರಿಸಿದ ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರತಿಕ್ರಿಯಿಸಿ ಕಳೆದ ವರ್ಷವು ಆ ಪಾರ್ವತಿ ಅವರ ಕುಟುಂಬಕ್ಕೆ ನಷ್ಟವಾಗಿದ್ದು ಪರಿಹಾರ ಒದಗಿಸಿಕೊಡಲಾಗಿತ್ತು. ಈ ಭಾರಿಯೂ ಸಮಸ್ಯೆ ಮರುಕಳಿಸಿದೆ. ಕೂಡಲೇ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕಂಪೆನಿಯನ್ನು ಸಂಪರ್ಕಿಸಿ ಪರಿಹಾರ ನೀಡುವಂತೆ ತಿಳಿಸಲಾಗುವುದಲ್ಲದೇ, ಸಮಸ್ಯೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ವಹಿಸುವುದಾಗಿ ತಿಳಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಈ ಸಂದರ್ಭದಲ್ಲಿ ಬೈಂದೂರು ಗಾಣಿಗ ಸೇವಾ ಸಂಘ ಬೈಂದೂರು ಘಟಕದ ಅಧ್ಯಕ್ಷ ಗೋಪಾಲ ಗಾಣಿಗ, ಕಾರ್ಯದರ್ಶಿ ಸವಿತಾ ದಿನೇಶ್, ಉಪ್ಪುಂದ ಘಟಕದ ಅಧ್ಯಕ್ಷ ರಾಘವೇಂದ್ರ ಗಾಣಿಗ, ಕಾರ್ಯದರ್ಶಿ ಗೋಪಿ ಹಾಗೂ ಸಂಘಟನೆಯ ಪ್ರಮುಖರು ಜೊತೆಗಿದ್ದರು.