ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ – ಅಪಘಾತಕ್ಕೆ ದಾರಿ

Call us

ಬೈಂದೂರು: ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇಂದು ನಿನ್ನೆಯದಲ್ಲ! ಚತುಷ್ಪಥ ರಸ್ತೆ ನಿರ್ಮಾಣವಾಗುವುದಕ್ಕೂ ಮುಂಚೆಯೇ ಇಲ್ಲಿನ ತಿರುವು ಅಪಘಾತದ ಹೆದ್ದಾರಿಯಾಗಿ ಮಾರ್ಪಟ್ಟಿತ್ತು. ಪ್ರಪಾತ ಹಾಗೂ ಗುಡ್ಡದ ನಡುವಿನ ತಿರುವಿನ ಭೂ ಪ್ರದೇಶದಲ್ಲಿ ರಸ್ತೆ ಹಾದು ಹೋಗಿದ್ದು, ಆಗಾಗ ಭೀಕರ ಅಪಘಾತಗಳು ಸಂಭವಿಸಿ ರಾಷ್ಟ್ರೀಯ ಹೆದ್ದಾರಿ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ

Call us

ಇಲ್ಲಿ ಟ್ಯಾಂಕರ್ ಅಪಘಾತದಲ್ಲಿ ಹೊತ್ತಿ ಉರಿದು ಚಾಲಕ ಸಜೀವ ದಹನವಾದ ಘಟನೆ, ಶಾಲಾ ವಾಹನ ಪಲ್ಟಿಯಾಗಿ ಇನ್ನೇನು ಪ್ರಪಾತಕ್ಕೆ ಬೀಳುವಲ್ಲಿ ತಪ್ಪಿದ ಅನಾಹುತ ಇಂತಹ ಹಲವಾರು ಗಂಭೀರ ಘಟನೆಗಳು ನಡೆಯುತ್ತಲೇ ಇದೆ.

ಚತುಷ್ಪಥ ಹೆದ್ದಾರಿಯಾದ ನಂತರವು ತಪ್ಪದ ಗೋಳು:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ ಚಾಲನೆ ಸಿಕ್ಕ ನಂತರ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ತಿರುವಿನ ದಿಕ್ಕನ್ನೆ ಬದಲಾಯಿಸಿ ಒತ್ತಿನೆಣೆ ರಾಘವೇಂದ್ರ ಮಠದ ಎದುರಿನಿಂದ ಗುಡ್ಡದ ಮೇಲೆ ಹಾದು ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಗುಡ್ಡವನ್ನು ಮದ್ಯ ಭಾಗದಲ್ಲಿ ಕೊರೆದು ಸಮತಟ್ಟಾದ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಂತೆ ಮಾಡಲಾಯಿತು.

Call us

ಈ ಕಾಮಗಾರಿ ಅವೈಜ್ಞಾನಿಕ ಎಂದು ಸ್ಥಳೀಯರ ವಿರೋಧ ವ್ಯಕ್ತವಾದರೂ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಗುತ್ತಿಗೆ ಸಂಸ್ಥೆ ಗುಡ್ಡ ಕೊರೆದು ಕಾಮಗಾರಿ ಮುಂದುವರಿಸಿದ ಪರಿಣಾಮ ಕಳೆದ ಐದಾರು ವರ್ಷಗಳಿಂದ ಮಳೆಗಾಲದಲ್ಲಿ ಗುಡ್ಡ ಕುಸಿತ, ಉಂಟಾಗಿ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ.

ಈ ನಡುವೆ ಇಲ್ಲಿ ಹೊಸ ರಸ್ತೆಯಾದ ನಂತರ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಿಲ್ಲ. ಭಟ್ಕಳದಿಂದ ಬೈಂದೂರಿಗೆ ಬರುವ ಮಾರ್ಗ ಎತ್ತರದಲ್ಲಿದ್ದರೆ ಬೈಂದೂರಿನಿಂದ ಭಟ್ಕಳಕ್ಕೆ ಹೋಗುವ ಮಾರ್ಗ ತಗ್ಗು ಪ್ರದೇಶದಲ್ಲಿದ್ದು ತಿರುವಿನ ಎತ್ತರದ ಪ್ರದೇಶದಲ್ಲಿ ಸಂಚರಿಸುವ ವಾಹನ ಪಲ್ಟಿಯಾದರೆ ತಗ್ಗು ಪ್ರದೇಶದ ರಸ್ತೆಗೆ ಬಿದ್ದು ಅಲ್ಲಿ ಚಲಿಸುವ ವಾಹನಗಳಿಗೆ ಅಪಾಯ ತಪ್ಪಿದ್ದಲ್ಲ. ಸರಾಗ ನೀರು ಹರಿಯುವುದಕ್ಕೊ ಅಥವಾ ಇನ್ಯಾವ ಉದ್ದೇಶಕ್ಕೊ ಈ ರೀತಿ ಎತ್ತರ ತಗ್ಗಿನ ರಸ್ತೆ ನಿರ್ಮಾಣ ಮಾಡಲಾಗಿದೆಯೊ ಗೊತ್ತಿಲ್ಲ ಆದರೆ ಈ ವಾರದಲ್ಲಿಯೇ ಎರಡು ಅಪಘಾತಗಳು ನಡೆದಿದ್ದು ತಿಂಗಳಲ್ಲಿ ಇಂತಹ ಹಲವಾರು ಘಟನೆಗಳು ನಡೆಯುತ್ತದೆ.

ಒಂದೆಡೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಾಗ ಗುಡ್ಡ ಕುಸಿತ ಸಂಚಾರ ಅಡಚಣೆ, ಇನ್ನೊಂದೆಡೆ ಆಗಾಗ ನಡೆಯುವ ಗಂಭಿರ ಅಪಘಾತಗಳು ಇಲ್ಲಿನ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ರಾಘವೇಂದ್ರ ಮಠ, ಮಹಾಸತಿ ಅಮ್ಮನವರ ದೇವಾಲಯ ಮುಂತಾದ ಪ್ರಮುಖ ಸ್ಥಳಗಳು ಇದೇ ಭಾಗದಲ್ಲಿದ್ದು ಸಂಚರಿಸುವ ಸಾರ್ವಜನಿಕರು ಸೇರಿದಂತೆ ಸುತ್ತಲಿನ ನಿವಾಸಿಗಳಿಗೆ ಗುಡ್ಡ ಕುಸಿತದ ಭೀತಿ ಇದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಂಭಂದಿಸಿದ ಗುತ್ತಿಗೆ ಸಂಸ್ಥೆ ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿಯಲ್ಲಿ ಅದಕ್ಕೊಂದು ಪರಿಹಾರ ಒದಗಿಸಬೇಕಾದ ಅನಿವಾರ್ಯತೆ ಇದ್ದು ಗುಡ್ಡ ಉಳಿಸುವ ನಿಟ್ಟಿನಲ್ಲಿ ಹಾಗೂ ಅಪಘಾತ, ಅಪಾಯಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸಂಬಂಧಪಟ್ಟವರು ಕಾರ್ಯಪ್ರವೃತ್ತರಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

ವರದಿ: ರವಿರಾಜ್ ಬೈಂದೂರು

Leave a Reply

Your email address will not be published. Required fields are marked *

five × three =