ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುಲ್ವಾಡಿಯಿಂದ ಕಂಡ್ಲೂರು ಕಡೆಗೆ ಅಕ್ರಮ ಗೋಸಾಗಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ತಡೆಯಲೆತ್ನಿಸಿದ ಸಂದರ್ಭ ಪೊಲೀಸ್ ಪೇದೆಯೋರ್ವ ಗಾಯಗೊಂಡ ಘಟನೆ ಕಂಡ್ಲೂರಿನಲ್ಲಿ ನಡೆದಿದೆ. ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೨೫ ದನಗಳ ಪೈಕಿ ೧೧ ದನಗಳು ಮೃತಪಟ್ಟಿವೆ.
ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ತಾಲೂಕಿನ ಗುಲ್ವಾಡಿ ಕಡೆಯಿಂದ ಬಸ್ರೂರು ಮೂಲಕ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಗುಲ್ವಾಡಿ ಸೇತುವೆ ಮೇಲೆ ವಾಹನವನ್ನು ಪೊಲೀಸರು ಅಡ್ಡ ಹಾಕಿದ್ದರು. ಆದರೆ ಅಲ್ಲಿ ವಾಹನ ನಿಲ್ಲಿಸದೇ ಪರಾರಿಯಾದ ಆರೋಪಿಗಳು ಬಸ್ರೂರು ಮೂಲಕ ಕಂಡ್ಲೂರು ಕಡೆಗೆ ತೆರಳಿದ್ದರು. ಕಂಡ್ಲೂರಿನಲ್ಲಿ ಗ್ರಾಮಾಂತರ ಪೊಲೀಸರು ಠಾಣೆ ಎದುರು ಸಿಬ್ಬಂದಿಗಳಾದ ಅಶೋಕ್ ಮತ್ತು ಪ್ರಶಾಂತ್ ನಾಗಣ್ಣ ಬ್ಯಾರಿಕೆಡ್ ಅಳವಡಿಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನ ಬರುವುದನ್ನೇ ಕಾಯುತ್ತಿದ್ದರು. ಆದರೆ ಅಲ್ಲಿಯೂ ವಾಹನವನ್ನು ನಿಲ್ಲಿಸದೇ ಬ್ಯಾರಿಕೇಡ್‌ಗೆ ಗುದ್ದಿ ಆರೋಪಿಗಳು ಮುಂದುವರಿದಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ವಾಹನ ಗುದ್ದಿದ್ದ ರಭಸಕ್ಕೆ ಬ್ಯಾರಿಕೇಡ್ ಪೊಲೀಸ್ ಸಿಬ್ಬಂದಿ ಪ್ರಶಾಂತ್ ನಾಗಣ್ಣ ಅವರ ಕಾಲಿನ ಮೇಲೆ ಬಿದ್ದು, ಮಂಡಿ ಚಿಪ್ಪಿಗೆ ತೀವ್ರ ಪ್ರಮಾಣದ ಗಾಯವಾಗಿದೆ. ಪ್ರಶಾಂತ್ ನಾಗಣ್ಣ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳು ಸಾಗುತ್ತಿದ್ದ ವಾಹನವನ್ನು ಹಿಂಬಾಲಿಸಿದ ಪೊಲೀಸರು ಕೊನೆಗೂ ಸೇತುವೆ ಸಮೀಪ ವಾಹನವನ್ನು ಅಡ್ಡಗಟ್ಟಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.