ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಟೆಲಿ ಸೈಕಿಯಾಟ್ರಿಕ್ ಕ್ಯಾಂಪ್ ಅನ್ನು ಆರಂಭಿಸಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಚಿಕಿತ್ಸೆಯಲ್ಲಿ ಖನ್ನತೆ ಹಾಗೂ ಮದ್ಯ ವ್ಯಸನಿಗಳು ಹೆಚ್ಚಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳ ಮೊದಲ ಸೋಮವಾರ ಈ ಟೆಲಿ ಕ್ಯಾಂಪ್ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಈ ಚಿಕಿತ್ಸೆಯಲ್ಲಿ 50 ರಿಂದ 60 ಮಂದಿ ರೋಗಿಗಳು ಪ್ರತಿ ತಿಂಗಳು ಪಾಲ್ಗೊಳ್ಳುತ್ತಿದ್ದಾರೆ.
ವೈದ್ಯರ ಜತೆ ಮಣಿಪಾಲದ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥರೂ ಮಾತುಕತೆ ನಡೆಸಿ ಕೌನ್ಸೆಲಿಂಗ್ ಮೂಲಕ ಚಿಕಿತ್ಸೆ ನೀಡುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಈ ಆಸ್ಪತ್ರೆಯಲ್ಲಿ ನಡೆಸುತ್ತಿರುವ ಟೆಲಿ ಸೈಕಿಯಾಟ್ರಿಕ್ ಕ್ಯಾಂಪ್ ಕಂಡ್ಲೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿರುವುದು ಗಮನಾರ್ಹ.
ಪ್ರತಿದಿನವೂ 150 ರಿಂದ 200 ರೋಗಿಗಳು ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ ರೋಗಿಗಳಿಗೆ ಆರು ಹಾಸಿಗೆಗಳಿವೆ. ಬೆಳಗ್ಗೆಯಿಂದ ಸಂಜೆಯವರೆಗೆ ಇಲ್ಲಿ ಚಿಕಿತ್ಸೆ ಲಭ್ಯ. ಬಳ್ಕೂರು, ಕಾವ್ರಾಡಿ, ಹಳ್ನಾಡುಗಳಲ್ಲಿ ಮೂರು ಉಪಕೇಂದ್ರಗಳಿವೆ.
9 ಮಂದಿ ಆಶಾ ಕಾರ್ಯಕರ್ತೆಯರು ಸೇರಿದಂತೆ 5 ಮಂದಿ ಸಿಬ್ಬಂದಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಈಗಾಗಲೇ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆರಂಭವಾಗಿದೆ. ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಔಷಧಗಳ ದಾಸ್ತಾನು ಇದೆ. ಈ ಎಲ್ಲ ಸೌಲಭ್ಯಗಳ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ.
ಬಳ್ಕೂರು ಮತ್ತು ಕಾವ್ರಾಡಿ ಗ್ರಾ.ಪಂ. ನಮ್ಮ ಆರೋಗ್ಯ ಕೇಂದ್ರಕ್ಕೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿರುವುದು ಉಲ್ಲೇಖನೀಯ. ಒಮ್ಮೆ ಔಷಧಗಳ ಕೊರತೆಯುಂಟಾದಾಗ ರೂ. 5,000 ನೀಡಿದ್ದು ಗ್ರಾ.ಪಂ.ನ ಸಹಕಾರಕ್ಕೆ ಸಾಕ್ಷಿಯಾಗಿದೆ. ಪ್ರಸ್ತುತ ಇಲ್ಲಿ ಎಲ್ಲ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುತ್ತಿದ್ದು ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಮತ್ತಷ್ಟು ಮುತುವರ್ಜಿಯಿಂದ ಕೆಲಸ ನಿರ್ವಹಿಸುವ ಉದ್ದೇಶವಿದೆ. – ಡಾ| ಲತಾ ನಾಯಕ್