ಕನ್ನಡದ ಕಾಯಕಯೋಗಿ ವೀರಣ್ಣ ಕುರವತ್ತಿಗೌಡರ್

ಹಸಿರು ಬಣ್ಣದ ಧಿರಿಸು ಧರಿಸಿ, ಹಸಿರು ಶಾಲಿನ ಜೊತೆಯಲ್ಲೊಂದು ಕನ್ನಡದ ಶಾಲು ಹೊದ್ದು, ಬಗಲಿಗೊಂದು ಬ್ಯಾಗು ಸಿಕ್ಕಿಸಿಕೊಂಡು ಅವರು ಹೊರಟರೆಂದರೇ ಎಲ್ಲಿಯೋ ಕನ್ನಡದ ಕಾರ್ಯಕ್ರಮವಿದೇ ಎಂದೇ ಅರ್ಥ. ಅಷ್ಟರ ಮಟ್ಟಿಗೆ ಈ ವ್ಯಕ್ತಿಗೂ ಕನ್ನಡ ಕಾರ್ಯಕ್ರಮಗಳಿಗೂ ಬಿಡಿಸಲಾರದ ನಂಟು ಬೆಳೆದಿದೆ.

ಹೌದು ವೀರಣ್ಣ ನಾಗಪ್ಪ ಕುರವತ್ತಿಗೌಡರ ಎಂಬ ಈ ಕಾಯಕಯೋಗಿ, ಬರಿಯ ತನ್ನ ದುಡಿಮೆಗಷ್ಟೇ ಸೀಮಿತವಾಗಿ ಉಳಿಯದೇ ಕನ್ನಡ ರಚನಾತ್ಮಕ ಕಾಯಕದಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಸಮ್ಮೇಳನಗಳೆಂದರೇ ಯಾರೂ ಬರುವುದಿಲ್ಲ. ಅದು ಒಂದಿಷ್ಟು ಸೀಮಿತ ವರ್ಗಕ್ಕಷ್ಟೇ ಸಂಬಂಧಿಸಿದ್ದು ಎಂಬ ಆರೋಪಗಳಿಗೆ ಅಪವಾದವೆಂಬಂತಿರುವ ವೀರಣ್ಣ ಈವರೆಗೆ 25 ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ, 45ಕ್ಕೂಹೆಚ್ಚು ವಿವಿಧ ಜಿಲ್ಲಾ ತಾಲೂಕು ಸಮ್ಮೇಳನಗಳಲ್ಲಿ, ನೂರಾರು ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಕನ್ನಡ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಸಮ್ಮೇಳನಗಳಿಗೆ ಯಾರು ಬರುತ್ತಾರೋ ಇಲ್ಲವೂ ಗೊತ್ತಿಲ್ಲ ವೀರಣ್ಣ ಮಾತ್ರ ಕನ್ನಡದ ಕಾರ್ಯಕ್ರಮಗಳಿಗೆ ಖಾಯಂ ಹಾಜರ್. (ಕುಂದಾಪ್ರ ಡಾಟ್ ಕಾಂ ವರದಿ)

ಮೂಲತಃ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದವರಾದ ನಲವತ್ತೈದು ವರ್ಷ ಪ್ರಾಯದ ವೀರಣ್ಣ ಸುಮಾರು ಹದಿನಾರು ವರ್ಷದ ಹಿಂದೆ ಕೃಷಿಯಲ್ಲಿ ನಷ್ಟ ಅನುಭವಿಸಿ ಬದುಕು-ಉದ್ಯೋಗ ಅರಸಿಕೊಂಡು ಊರನ್ನು ತೊರೆದು ಉಡುಪಿಗೆ ಬಂದು ನೆಲೆಸಿದವರು. ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಮಗನೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕರಾವಳಿ ತನಗೆ ಹೊಸ ಬದುಕನ್ನು ನೀಡಿದೆ ಎಂಬುದನ್ನು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ

ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿರುವ ವೀರಣ್ಣ, ಹೊಸದಾಗಿ ಸದಸ್ಯರಾಗಬಯಸುವವರಿಗೂ ಮಾರ್ಗದರ್ಶನವನ್ನಿತ್ತು ತಮ್ಮ ಬ್ಯಾಗಿನಲ್ಲಿ ಸದಾ ಇರುವ ಫಾರಂ ತುಂಬಿಸಿ ಪರಿಷತ್ತಿಗೆ ಕಳುಹಿಸಿಕೊಡುತ್ತಿದ್ದಾರೆ. ಕೂಲಿ ಕೆಲಸ ಮಾಡುವುದರ ಜೊತೆಯಲ್ಲಿಯೇ ಕವನ ಬರೆಯುವ ಅಭಿರುಚಿಯನ್ನೂ ಬೆಳೆಸಿಕೊಂಡಿರುವ ಅವರು. 2010ರಲ್ಲಿ ‘ರೈತನ ಕೂಗು’ ಎಂಬ ಕವನ ಸಂಕಲನವನ್ನೂ ಹೊರತಂದಿದ್ದಾರೆ.(ಕುಂದಾಪ್ರ ಡಾಟ್ ಕಾಂ ವರದಿ)

ಉಡುಪಿಯಲ್ಲಿ ಪರಿಷತ್ತಿನ ಕಟ್ಟಡ ನಿರ್ಮಾಣವಾಗಬೇಕೆಂದು ತಮ್ಮ ಮೂರು ದಿನದ ದುಡಿಮೆಯ ಹಣವನ್ನು ನೀಡಿ ತಮ್ಮ ಅಭಿಮಾನವನ್ನು ತೋರಿಸಿಕೊಟ್ಟಿದ್ದಾರೆ. ಕನ್ನಡದ ಬಗ್ಗೆ ವೇದಿಕೆಗಳಲ್ಲಿ ಮಾತಾನಾಡುವ ಮಂದಿ ಮೊದಲು ತಮ್ಮ ಮಕ್ಕಳನ್ನು ಕನ್ನಡದ ಶಾಲೆಗೆ ಸೇರಿಸಲಿ. ಆಗ ಮಾತ್ರ ಅವರಿಗೆ ಕನ್ನಡದ ಬಗೆಗೆ ಮಾತನಾಡುವ ನೈತಿಕತೆ ಇರುತ್ತದೆ ಎಂದು ಆಕ್ರೋಶವನ್ನೂ ಅವರು ವ್ಯಕ್ತಪಡಿಸುವ ವೀರಣ್ಣನಿಗೆ ತನ್ನ ಹುಟ್ಟೂರಿನಲ್ಲಿ ಹೋಬಳಿ ಮಟ್ಟದ ಕನ್ನಡದ ಕಾರ್ಯಕ್ರಮವನ್ನು ಸಂಘಟಿಸಬೇಕು ಎನ್ನುವ ಅಭಿಲಾಷೆ ಇದೆ. (ಕುಂದಾಪ್ರ ಡಾಟ್ ಕಾಂ ವರದಿ)

ಅದೇನೇ ಇರಲಿ. ತುತ್ತಿನ ಚೀಲಕ್ಕಾಗಿ ದಿನವೂ ದುಡಿಯಬೇಕಾದ ಅನಿವಾರ್ಯತೆಯ ನಡುವೆ ವೀರಣ್ಣ ಅವರ ಕನ್ನಡ ಪ್ರೀತಿಯನ್ನು ಮಾತ್ರ ಮೆಚ್ಚಲೇಬೇಕಾದುದು.

-ಸುನಿಲ್ ಹೆಚ್. ಜಿ. ಬೈಂದೂರು

Leave a Reply

Your email address will not be published. Required fields are marked *

5 × 3 =