ಕನ್ನಡ ರಾಜ್ಯೋತ್ಸವ: ಸ್ವ-ವಿಮರ್ಶೆಗೆ ಇದು ಸಕಾಲ.

ಕನ್ನಡ ರಾಜ್ಯೋತ್ಸವವನ್ನು ಕೇವಲ ಆಚರಣೆಗಷ್ಟೇ ಸೀಮಿತಗೋಳಿಸದೇ ನಾಡು–ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾಗಿದೆ.
ಕನ್ನಡ ರಾಜ್ಯ ನಿರ್ಮಾಣವಾಗಿ 58 ವರ್ಷಗಳು ಉರುಳಿದರೂ ಇನ್ನೂ ರಾಜ್ಯದಲ್ಲಿ ನಿಜವಾದ ಅರ್ಥದಲ್ಲಿ ಕನ್ನಡಕ್ಕೆ ಸಿಗಬೇಕಾದ ಸಾರ್ವಭೌಮ ಸ್ಥಾನಮಾನ ಸಿಕ್ಕಿಲ್ಲ. ಜನಜೀವನದ ಎಲ್ಲಾ ವಿಭಾಗದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕೆನ್ನುವ ಒತ್ತಾಯವನ್ನು ಹೇರಬೇಕಾದ ಸಮಯದಲ್ಲಿ ನಾವಿನ್ನು ಕನ್ನಡ ಶಾಲೆಗಳನ್ನು ಮುಚ್ಚುವವರ ವಿರುದ್ಧ ಧ್ವನಿ ಎತ್ತಬೇಕಾದ ಸ್ಥಿತಿಯಲ್ಲಿದ್ದೆವೆ. ಕನ್ನಡ ನಾಡಿನ ಉದ್ಧಾರಕ್ಕಾಗಿ ಸಿದ್ದಪಡಿಸಿಟ್ಟ ವರದಿಗಳೇಲ್ಲವೂ ಧೂಳು ಹಿಡಿಯುತ್ತಿವೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ, ಪ್ರಭಾವ ಬೀರುವ ಕೆಟ್ಟ ಚಾಳಿ ನಿಂತಿದೆ ಎನ್ನಲಾಗದು. ರಾಜ್ಯೋತ್ಸವವೆನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ವಿಪರ್ಯಾಸವೇ ಸರಿ.
ಕಾಲ, ದೇಶದ ಪ್ರಜ್ಞೆ ಇಲ್ಲ, ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ನಮ್ಮ ನಡುವೆ ಸಾಮಾನ್ಯರ ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಬದುಕುವ ಒಂದು ದುಷ್ಟ ವರ್ಗ ತಲೆಯೆತ್ತುತ್ತಿದೆ. ಭಾವುಕ ಮಂದಿ ಪೂರ್ವಾಪರ ತಿಳಿಯದೆ ಉಘೇ ಉಘೇ ಎನ್ನುತ್ತಿದ್ದಾರೆ. ಇದು ಇವತ್ತಿನ ನಮ್ಮ ಸ್ಥಿತಿ. ಬಹುಷಃ ಇವತ್ತು ಕನ್ನಡ ನಾಡು – ನುಡಿ ಹಿಂದೆಂದೂ ಇಲ್ಲದಂತೆ ವಿಭಿನ್ನ ವಿದ್ಯಮಾನಗಳನ್ನು, ಸಂಘರ್ಷಗಳನ್ನು ಎದುರಿಸುತ್ತಿದೆ. ಧರ್ಮ, ಜಾತಿ ಅಥವಾ ಕೋಮು ಸಂಬಂಧಿ ವಿವಾದಗಳು ಒಂದು ಕಡೆ, ಭಾಷೆ, ಗಡಿ ಮತ್ತು ನೀರಿನ ವಿಚಾರಗಳು ಇನ್ನೊಂದೆಡೆ, ಈ ರಾಜ್ಯದ ರಾಜಕೀಯ ಮತ್ತು ಆಡಳಿತಾತ್ಮಕ ವಿಸಂಗತಿಗಳು, ಜಾಗತೀಕರಣ ಮತ್ತು ಅದು ತಂದ ವಿಲಕ್ಷಣ ಆಧುನಿಕತೆ ಬಹಿರಂಗದಲ್ಲೂ ಅಂತರಂಗದಲ್ಲೂ ಉಂಟುಮಾಡುತ್ತಿರುವ ಬದಲಾವಣೆಗಳು, ನಕ್ಸಲ್ ಮತ್ತು ಧಾರ್ಮಿಕ/ರಾಜಕೀಯ ಭಯೋತ್ಪಾದಕ ಶಕ್ತಿಗಳು ಹುಟ್ಟಿಸುತ್ತಿರುವ ಕೆಲವು ತಲ್ಲಣಗಳೂ ಅಲ್ಲದೆ ಸಾಮಾನ್ಯ ಮನುಷ್ಯನೊಬ್ಬ ದಿನನಿತ್ಯದ ತನ್ನ ಬದುಕಿನಲ್ಲಿ, ಮಾರುಕಟ್ಟೆಯಲ್ಲೋ, ಉದ್ಯೋಗ ರಂಗದಲ್ಲೋ, ತನ್ನ ಅತಿನಿಕಟ ಸಮಾಜದಲ್ಲೋ ಎದುರಿಸುತ್ತಿರುವ, ಕ್ಷುಲ್ಲಕ – ಕ್ಷುದ್ರ ಸಮಸ್ಯೆಗಳು ಕನ್ನಡದ ಪೂರಕ ಬೆಳೆವಣಿಗೆಗೆ ಕುತ್ತು ತಂದಿದೆ.
ನಿಜಾರ್ಥದಲ್ಲಿ ರಾಜ್ಯೋತ್ಸವ ಸಂಭ್ರಮ ಸಂಪನ್ನಗೊಳ್ಳುವುದು ಈ ಎಲ್ಲಾ ಸಮಸ್ಯೆಗಳಿಗೂ ಇತಿಶ್ರೀ ಹಾಡಿದಾಗಲೇ ಅನ್ನೊದಂತು ಸತ್ಯ. ಕನ್ನಡ ಪ್ರೀತಿ ನಿತ್ಯನೂತವಾಗಿರಲಿ. ಕನ್ನಡ ಕಟ್ಟುವ ಕಾರ್ಯವನ್ನು ಮುಂದುವರಿಸೋಣ.

ಕನ್ನಡ ನಾಡಿಗೆ ಕೀರ್ತಿ ತಂದುಕೊಟ್ಟ ಎಲ್ಲಾ ಕನ್ನಡಮ್ಮನ ಮಕ್ಕಳಿಗೆ, ಕನ್ನಡಕ್ಕಾಗಿಯೇ ಬದುಕುತ್ತಿರುವ ಕನ್ನಡದ ಕುವರರಿಗೆ, ಕನ್ನಡಾಭಿಮಾನಿಗಳಿಗೆ, ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳು. ಕನ್ನಡವೇ ಉಸಿರಾಗಲಿ.

Leave a Reply

Your email address will not be published. Required fields are marked *

14 − two =