ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ದೇಶದ ಕರಾವಳಿ ತೀರಗಳ ಭದ್ರತೆ ದೃಷ್ಟಿಯಿಂದ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮೀನುಗಾರರು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು. ಕರಾವಳಿ ತೀರದ ರಕ್ಷಣೆ ಉದ್ದೇಶದಿಂದ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದ್ದು, ಯಾರಿಗೂ ತೊಂದರೆ ಪಡಿಸುವ ಉದ್ದೇಶ ಇಲ್ಲ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ನ ಅಸಿಸ್ಟೆಂಟ್ ಕಮಾಂಡರ್ ಕೆ.ವರುಣ್ ಹೇಳಿದರು.
ಅವರು ಗಂಗೊಳ್ಳಿ ಬಂದರು ಪ್ರದೇಶದಲ್ಲಿರುವ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಮೀನುಗಾರರ ರಕ್ಷಣೆ, ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಮೀನುಗಾರರಿಗೆ ಮಾಹಿತಿ ನೀಡಿ ಮಾತನಾಡಿದರು.
ಆಗಸ್ಟ್ 15ರಂದು ಕರಾವಳಿ ತೀರಗಳ ಮೂಲಕ ದೇಶದಲ್ಲಿ ಉಗ್ರರ ದಾಳಿ ಸಾಧ್ಯತೆ ಇರುವುದರಿಂದ ಕರಾವಳಿ ತೀರಗಳಲ್ಲಿ ಭದ್ರೆತ ಹೆಚ್ಚಿಸಲಾಗಿದೆ. ತೀರದಲ್ಲಿ ಅಥವಾ ಸಮುದ್ರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಯಾ ಅನುಮಾಸ್ಪದ ಬೋಟು, ದೋಣಿಯನ್ನು ಕಂಡರೆ ಸ್ಥಳೀಯ ಪೊಲೀಸ್ ಠಾಣೆ, ಕರಾವಳಿ ಪೊಲೀಸ್ ಠಾಣೆ ಅಥವಾ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಹೊರರಾಜ್ಯದ ಮೀನುಗಾರರನ್ನು ನೋಡಿದರೆ ಅವರ ಗುರುತಿನ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು. ಮೀನುಗಾರಿಕಾ ಸಮಯದಲ್ಲಿ ಬೋಟಿನ ಅಗತ್ಯವಿರುವಷ್ಟು ಮೀನುಗಾರರು ಮಾತ್ರ ತೆರಳಬೇಕು ಎಂದರು.
ಮೀನುಗಾರಿಕಾ ಸಮಯದಲ್ಲಿ ಬೋಟಿನ ದಾಖಲೆಗಳ ಮೂಲ ಪ್ರತಿಯನ್ನು ಮತ್ತು ಬಯೋ ಮೆಟ್ರಿಕ್ ಕಾರ್ಡ್ನ್ನು ಹೊಂದಿರಬೇಕು. ಮೀನುಗಾರಿಕಾ ನಿಯಂತ್ರಣ ಉಪಕರಣಗಳನ್ನು ಇಟ್ಟುಕೊಳ್ಳಬೇಕು. ಮೀನುಗಾರಿಕಾ ಬೋಟುಗಳಲ್ಲಿ ಲೈಫ್ ಜಾಕೇಟ್ ಮತ್ತು ಲೈಫ್ ಬಾಯ್ಗಳನ್ನು ಹೊಂದಿರಬೇಕು. ಮೀನುಗಾರಿಕಾ ಬೋಟುಗಳಲ್ಲಿ ಡಿಸ್ಟೆಂಸ್ ಎಂರ್ಟ್ ಟ್ರಾಸ್ಮಿಟರ್ಗಳನ್ನು ಅಳವಡಿಸತಕ್ಕದ್ದು. ಸಮುದ್ರದಲ್ಲಿ ತಪಾಸಣೆ ಸಂದರ್ಭ ಅಗತ್ಯ ದಾಖಲೆಗಳನ್ನು ತೋರಿಸಿ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು ಅವರು ಹೇಳಿದರು.
ಮಂಗಳೂರು ಕಸ್ಟಮ್ಸ್ ಇಲಾಖೆಯ ಸುಪರಿಟೆಂಡೆಂಟ್ಗಳಾದ ಗಣೇಶ್, ರವೀಂದ್ರ, ಗಂಗೊಳ್ಳಿ ಮೀನುಗಾರಿಕಾ ಇಲಾಖೆಯ ಗೋಪಾಲಕೃಷ್ಣ, ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಲಕ್ಷ್ಮೀಶ ಮೊದಲಾದವರು ಉಪಸ್ಥಿತರಿದ್ದರು.