ಕಲಾವಿದ ಮತ್ತು ಕಲೆಯ ಸಂಸ್ಕಾರ

Call us

ಡಾ. ಶುಭಾ ಮರವಂತೆ

Call us

Call us

ಬ್ರಹ್ಮಾಂಡವೆಂಬ ಈ ವೇದಿಕೆಯಲ್ಲಿ ನಾವೆಲ್ಲರೂ ಪಾತ್ರಧಾರಿಗಳು; ಸೂತ್ರಧಾರ ಆ ಭಗವಂತ. ಅವನು ಆಡಿಸಿದಂತೆ ಆಡುವ ಗೊಂಬೆಗಳು ನಾವು. ಇಂತಹ ವೇದಾಂತದ ಮಾತುಗಳನ್ನು ಕೇಳಿದಾಗ ನಾವೆಲ್ಲರೂ ಒಂದು ಬಗೆಯ ನಿರ್ಲಿಪ್ತತೆಗೆ ಜಾರಿ ಬಿಡುತ್ತೇವೆ. ಬದುಕಿನ ನೈರಾಶ್ಯಗಳಿಗೆ ಒಂದು ಸಾತ್ವಿಕ ನೆಮ್ಮದಿ ಹುಡುಕಲು ಹೊರಡುವ ಎಲ್ಲಾ ಭಾವ ಜೀವಿಗಳಿಗೆ ಸಂತೋಷದ ಮೂಲ ಎಲ್ಲಿದೆ ಎಂದು ಕೇಳಿದರೆ ಪರದ ಬದುಕಿನಲ್ಲಿಯೆ ಇದೆ ಎಂಬ ಉತ್ತರವೂ ಬಂದೀತು. ಇಹ ಮತ್ತು ಪರಗಳಿಗೆ ಬದುಕನ್ನು ಹೊಂದಿಸುವ ಪ್ರತಿಯೊಬ್ಬ ಕಲಾಕಾರನಿಗೂ ಜೀವನ ಕಲಿಸುವ ಪಾಠ ಬಹಳ ದೊಡ್ಡದು. ಈ ನಡುವಿನ ಬದುಕಿನಲ್ಲಿ ಅತಿಯಾಗಿ ಯಾವುದನ್ನು ಬಯಸದೆ ಇದ್ದದ್ದರಲ್ಲೇ ತೃಪ್ತಿ ಪಡೆಯುವ ಮನೋಸ್ಥಿತಿಯ ಮೂಲಕ ಬದುಕಿನ ಸಂತೋಷದ ಮೂಲವನ್ನು ಹುಡುಕಿಕೊಳ್ಳುವುದು ಈ ಹಂತದಲ್ಲಿ ಸಹಜವಾಗಿ ಬಿಡುತ್ತದೆ. ಕಲೆ, ಸಾಹಿತ್ಯವು ನೀಡುವ ಆನಂದ ಬ್ರಹ್ಮಾನಂದಕ್ಕೆ ಸಮಾನವಾದುದು ಎನ್ನುವುದನ್ನು ತಿಳಿದುಕೊಳ್ಳಲು ಅದರ ಸತ್ವವನ್ನು ಧೇನಿಸುವವನೆ ನಿಜವಾದ ಕಲಾ ತಪಸ್ವಿ. ಯಕ್ಷಗಾನದ ಬಹುತೇಕ ಹಿರಿಯ, ನಿಷ್ಠಾವಂತ ಕಲಾವಿದರಲ್ಲಿ ಈ ಗುಣವಿದೆ. ತನ್ನ ಆಂತರಿಕ ಭಾವ ಸೌಂದರ್ಯವನ್ನು ತನ್ನ ಟನಾ ಕುಶಲತೆ, ಧ್ವನಿ ಮಾಧುರ್ಯವನ್ನು ಸಹೃದಯ ಕಲಾವಿದನಿಗೆ ಉಣಬಡಿಸುವಲ್ಲಿ ತೃಪ್ತಿ ಕಾಣುತ್ತಾ ಪಾತ್ರವೇ ತಾನಾಗುವ, ಭಾವವೇ ತಾನಾಗುವ ತಾದಾತ್ಮ್ಯವನ್ನು ಅವರು ಸಾಧಿಸಿ ಬಿಡುತ್ತಾರೆ. ಕಲಾವಿದನಾಗುವುದೂ ಒಂದು ಸಾಧನೆ, ಸಂಸ್ಕಾರ. ಸತ್ಯ, ಪ್ರಾಮಾಣಿಕತೆ, ನಿಷ್ಠೆ, ನಾನು, ನನ್ನದೆನ್ನದ ನಿರಹಂಭಾವ, ಸಾಕ್ಷೀಪ್ರಜ್ಞೆ ಇವೆಲ್ಲವೂ ಒಟ್ಟಾಗಿ ಬೆರೆತ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಕಲೆಯು ನೀಡುವ ಸಂಸ್ಕಾರ ಕಾರಣವೇ ಹೊರತು ಬೇರೆನೂ ಅಲ್ಲ ಎನ್ನುವುದು ನಮ್ಮ ಕುಟುಂಬದ ದೊಡ್ಡ ನಂಬಿಕೆ. ನಮ್ಮ ಹಿರಿಯ ತಲೆಮಾರುಗಳು ಕಂಡುಕೊಂಡ ಈ ಆದರ್ಶಗಳು ಇಂದಿಗೂ ಮುಂದಿನ ತಲೆಮಾರುಗಳವರೆಗೂ ಬಳುವಳಿಯಾಗಿ ಹರಿದು ಬರುವುದಕ್ಕೆ ಇರುವ ಕಾರಣವೂ ಇದೆ ಇರಬಹುದು. ಹಾಗಾಗಿಯೆ ’ಕಲೆ ನಮ್ಮ ರಕ್ತಗತವಾಗಿದೆ’ ಎಂಬ ಮಾತಿಗೆ ಹೆಚ್ಚು ಬೆಲೆ ಬಂದಿರುವುದು.

yakshagana kundapra dot com (3)ಕಳೆದ ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದೀಚೆಗೆ ಉಂಟಾದ ಮೌಲ್ಯಕುಸಿತ ಒಟ್ಟು ಮನುಷ್ಯನ ನೈತಿಕತೆಯನ್ನು ತೀವ್ರವಾಗಿ ಪ್ರಶ್ನಿಸಿದೆ. ಹಣವೇ ಪ್ರಧಾನವೆಂಬ ತಿಳುವಳಿಕೆಗೆ ನಾವು ಬಂದ ಮೇಲೆ ಎಲ್ಲೆಲ್ಲೂ ಈ ವ್ಯಾಪಾರೀಕರಣ ಪ್ರಕ್ರಿಯೆಗೆ ಹೆಚ್ಚಿನ ಮಾನ್ಯತೆ ದೊರೆತಿದೆ. ಯಕ್ಷಗಾನವೂ ಇದಕ್ಕೆ ಹೊರತಾಗಿಲ್ಲ. ಮೌಲ್ಯವು ಹಣದೊಂದಿಗೆ ಬೆರೆತಿರುವುದೆ ಈ ಬಗೆಯ ಆಧಃಪತನಕ್ಕೆ ಕಾರಣ. ಹಾಡುಹಗಲಲ್ಲಿ ಮಾಂಗಲ್ಯ ಸರ ಕಸಿದುಕೊಂಡು ಹೋಗುವ ಧೂರ್ತಜನರಿರುವ ಈ ಸಮಾಜವನ್ನು ಆಗ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನಮ್ಮ ತಂದೆ ದಿ. ಶೀನದಾಸರು ಬಡಗುತಿಟ್ಟಿನ ಬಹು ಪ್ರಖ್ಯಾತ ಭಾಗವತರೆಂದು ಕರೆಸಿಕೊಳ್ಳುವ ಆ ಕಾಲಕ್ಕೆ ಮಂದಾರ್ತಿ, ಮಾರಣಕಟ್ಟೆ ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ. ಇನ್ನೂ ಟಿ.ವಿ. ಹಾವಳಿ ಗ್ರಾಮೀಣ ಭಾಗಗಳನ್ನು ಆವರಿಕೊಂಡಿರಲಿಲ್ಲ. ಯಕ್ಷಗಾನವೆಂದರೆ ಅದೊಂದು ದೇವಲೋಕದ ಕಲೆ, ಗಂಧರ್ವಗಾನ. ವಿದ್ಯತ್ ದೀಪಗಳು ರಂಗಸ್ಥಳವನ್ನು ಅಲಂಕರಿಸಿಕೊಂಡು ರಂಗುರಂಗಾಗಿ ಮಿಂಚುತ್ತಿದ್ದ ಕಾಲ. ರಂಗಸ್ಥಳದ ಹಿಮ್ಮೇಳದಲ್ಲಿ ಭಾಗವತರು ಕೆಂಪು ಮುಂಡಾಸು, ಬಿಳಿ ಪಂಚೆ, ಅಂಗಿ ಧರಿಸಿ ಕೊರಳಿಗೆ ದೇವಸ್ಥಾನವು ನೀಡಿದ ದೇವರ ಹಾರ (ಹೊಕ್ಕುಳವರೆಗಿನ ಚಿನ್ನದ ದೊಡ್ಡ ಗುಂಡಿನ ಸರ) ಹಾಕಿ ಕುಳಿತ ಭಂಗಿ ಎಷ್ಟು ದೂರಕ್ಕೂ ಕಣ್ಣು ಕೋರೈಸುವಂತಿರುತ್ತಿತ್ತು. ಆ ಸರವನ್ನು ಅಪ್ಪಯ್ಯ ತಮ್ಮ ಜೊತೆಯಲ್ಲಿಯೇ ಹಿಡಿದುಕೊಂಡು ಓಡಾಡುತ್ತಿದ್ದರು. ಮನೆಗೆ ಬಂದ ತಕ್ಷಣ ಅಮ್ಮನ ಕೈಗೆ ಕೊಟ್ಟು ನಿದ್ದೆಮಾಡಿ ಬಿಡುತ್ತಿದ್ದರು. ಸಂಜೆ ಹೋಗುವಾಗ ಅಮ್ಮನ ಕೈಯಿಂದ ತೆಗೆದುಕೊಂಡು ಬ್ಯಾಗಿಗೆ ಹಾಕಿಕೊಂಡು ಹೋಗುತ್ತಿದ್ದರು. ಮೇಳ ಮುಗಿಯುವನರೆಗೂ ಅದು ಅಪ್ಪಯ್ಯನ ಬಳಿಯೇ ಇರುತ್ತಿತ್ತು. ಕೊನೆಯ ದೇವರ ಸೇವೆಯ ದಿನ ಪುನಃ ದೇವಸ್ಥಾನಕ್ಕೆ ಒಪ್ಪಿಸಿ ಬರುವುದು ಸಂಪ್ರದಾಯ. ಬರೀ 20-25 ಚಿನ್ನದ ಗುಂಡನ್ನೆ ದಾರದಲ್ಲಿ ಪೋಣಿಸಿ ನಿರ್ಮಿಸಿದ ಹಾರವದು. ಈಗ ಅದರ ಬೆಲೆಯನ್ನು ಊಹಿಸುವುದೂ ಕಷ್ಟ. ಲಕ್ಷಾಂತರ ರೂಪಾಯಿ ಬೆಲೆಬಾಳಬಹುದು. ಮನೆಯಲ್ಲಿ ಕಡು ಬಡತನ. ಅನ್ನ, ಅನ್ನಕ್ಕೂ ತತ್ವಾರ. ಅಂಗಡಿಯಲ್ಲಿ ಬೆಳೆಯುತ್ತಲೇ ಇರುವ ಸಾಮಾನಿನ ಸಾಲದ ಚೀಟಿ. ಕೊರಳಿಗೆ ಬೀಣಿದಾರದಲ್ಲಿ ಕರಿಮಣಿ ಪುಟ್ಟ ತಾಳಿ, ಕಿವಿಗೊಂದು, ಮೂಗಿಗೊಂದು ಚೂರು ಬಂಗಾರ ಹಾಕಿಕೊಂಡು ಸಂಸಾರ ನಡೆಸುವ ಸಾಧ್ವಿ ಹೆಂಡತಿ ನಮ್ಮಮ್ಮ. ಈ ಕಷ್ಟಗಳ ನಡುವೆ ಒಮ್ಮೆಯೂ ಆ ಸರದ ಒಂದು ಗುಂಡು ಬಂಗಾರವನ್ನು ಬಳಸಿಕೊಳ್ಳೋಣವೆಂಬ ತುಡುಗು ಭಾವ ಒಂದು ಕ್ಷಣವೂ ಆ ದಂಪತಿಗಳಲ್ಲಿ ಸುಳಿಯಲಿಲ್ಲೆಂಬುದು ಆಶ್ಚರ್ಯಕರ ಸಂಗತಿ. ಮೋಸ, ವಂಚನೆಗೆ ಅವಕಾಶ ದೊರೆಯದೆ ಸಜ್ಜನರಾಗುವುದು ಬೇರೆ. ಅಂತವರು ಅಸಾಹಾಯಕ ಸತ್ಯಸಂಧರು. ಆದರೆ ಅಂತಹ ಅವಕಾಶ ದೊರೆತಾಗಲೂ ಅದನ್ನು ಬಳಸಿಕೊಳ್ಳದ ಸತ್ಯಸಂಧತೆ ತೋರುವವನು ನಿಜವಾದ ಸತ್ಯವಂತನೆನಿಸಿಕೊಳ್ಳಬಲ್ಲರು. ಕಲಾರಾಧನೆಯಿಂದ ದೊರೆಯಬಲ್ಲ ಇಂತಹ ಸಂಸ್ಕಾರ ನಿಜವಾಗಿ ದೊಡ್ಡದು. ಬಂಗಾರದ ಗಟ್ಟಿ ಕೈಯೊಳಗಿದ್ದರೂ ಅದರ ಬಗೆಗಿನ ನಿರ್ಲಿಪ್ತತೆ ಸಾಧಿಸಿಕೊಂಡ ನಮ್ಮ ತಂದೆ- ತಾಯಿಯ ನಿಷ್ಠೆ, ಆ ಕಲಾ ಸಂಸ್ಕಾರ ನಮ್ಮೊಳಗೊಂದು ಕುಡಿಯಾಗಿ ಮೊಳೆತಿದೆ. ಬಹುಕಾಲದವರೆಗೂ ಅದು ನಮ್ಮ ಜೊತೆಯಾಗಲಿ ಎಂಬುದೆ ನಮ್ಮ ಆಶಯ.

Call us

Call us

Leave a Reply

Your email address will not be published. Required fields are marked *

10 + 20 =