ಸುದ್ದಿಗೋಷ್ಠಿಯಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಮಂಜುನಾಥ ಭಂಡಾರಿ
ಕುಂದಾಪುರ: ಹಿಂದೆ ವಿರೋಧ ಪಕ್ಷದಲ್ಲಿ ಇದ್ದ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಬೇಕು ಎನ್ನುವ ಏಕೈಕ ಉದ್ದೇಶಕ್ಕಾಗಿ ಯುಪಿಐ ಸರ್ಕಾರದ ಕಾರ್ಯಕ್ರಮಗಳನ್ನು ವಿರೋಧ ಮಾಡುತ್ತಿದ್ದರು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಈ ಹಿಂದಿನ ಕಾರ್ಯಕ್ರಗಳನ್ನೆ ಹೆಸರು ಬದಲಾವಣೆ ಮಾಡಿ ನಮ್ಮದು ಎಂದು ಹೆಗಲು ತಟ್ಟಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಲೇವಡಿ ಮಾಡಿದ್ದಾರೆ. ಹೆಮ್ಮಾಡಿಯ ಖಾಸಗಿ ಹೋಟೇಲ್‌ನಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯುಪಿಐ ಸರ್ಕಾರದ ಉದ್ಯೋಗ ಭರವಸೆ, ಆಧಾರ್ ಕಾರ್ಡ್, ಬಳಕೆದಾರರ ಖಾತೆಗೆ ನೆರವಾಗಿ ಗ್ಯಾಸ್ ಸಬ್ಸಿಡಿ ನೀಡಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದ್ದಾರೆ. ಕೇಂದ್ರದಲ್ಲಿ ವಿತ್ತ ಸಚಿವರಾಗಿದ್ದ ಬಿ.ಜನಾರ್ಧನ್ ಪೂಜಾರಿಯವರು ಬ್ಯಾಂಕಿನ ಬಾಗಿಲಿಗೆ ಬಡವರನ್ನು ತರುವ ಪ್ರಯತ್ನವಾಗಿ ಯೋಜಿಸಿದ್ದ ಸಾಲ ಮೇಳದ ಕಾರ್ಯಕ್ರಮವನ್ನೆ ಅಲ್ಪ-ಸ್ವಲ್ಪ ಬದಲಾವಣೆಯೊಂದಿಗೆ ಜನ್ ಧನ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಯುಪಿಐ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪೇಟ್ರೋಲ್ ಬ್ಯಾರೆಲ್ ಗೆ ೧೫೦ ಡಾಲರ್ ಇದ್ದಿತ್ತು. ಇದೀಗ ಬ್ಯಾರೆಲ್‌ಗೆ ೫೦ ಡಾಲರ್ ಇದ್ದರೂ ತೈಲ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಪೆಟ್ರೋಲ್ ಲೀಟರ್‌ಗೆ ೨೦ ರೂಪಾಯಿಗೆ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಲೀಟರ್‌ಗೆ ೨೦ ರೂಪಾಯಿ ಏರಿಕೆ ಮಾಡಲು ಹುನ್ನಾರ ನಡೆಸುತ್ತಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಹಾಕುತ್ತೇವೆ ಎಂದು ಭರವಸೆಯ ಮಹಾಪೂರವನ್ನೆ ಹರಿಸಿದ್ದ ಮೋದಿ ಟೀಂ ಇದೀಗ ಮೌನಕ್ಕೆ ಶರಣಾಗಿದ್ದಾರೆ ಎಂದರು.
ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅನಂತಕುಮಾರ ಬೆಂಗಳೂರಿನ ಅಶೋಕ ಸೇರಿದಂತೆ ಐಟಿಡಿಸಿ ಹೋಟೇಲ್‌ಗಳನ್ನು ಖಾಸಗಿಯವರಿಗೆ ನೀಡಿದ್ದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಂದೆ ಒಂದು ಉದ್ದಿಮೆಗಳನ್ನು ಖಾಸಗಿಯವರಿಗೆ ನೀಡುವ ಕುರಿತು ಚಿಂತನೆಯನ್ನು ಮಾಡಿರಲಿಲ್ಲ, ಆದರೆ ಇದೀಗ ಮತ್ತೆ ಅದೇ ಹಳೆ ಚಾಳಿ ಮುಂದುವರೆಸಲು ಪ್ರಯತ್ನ ಸಾಗುತ್ತಿದೆ. ಮೈಸೂರಿನ ಲಲಿತ್ ಮಹಲ್ ಖಾಸಗಿಯವರ ಪಾಲಾಗುವ ದಿನಗಳು ದೂರವಿಲ್ಲ ಎಂದು ಹೇಳಿದ ಭಂಡಾರಿ ವ್ಯಾಪಾರ ಮನೋಭಾವದ ಬಿಜೆಪಿ ಯವರಿಂದ ಮಾರಾಟವಲ್ಲದೆ ಬೇರೇನೂ ನಿರೀಕ್ಷಿಸಲು ಸಾಧ್ಯವಲ್ಲ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು ಬಿಜೆಪಿ ಯವರು ಕಾಂಗ್ರೆಸ್ ಮುಕ್ತ ಭಾರತದ ಚಿಂತನೆಯಾದರೆ, ಕಾಂಗ್ರೆಸ್‌ನದ್ದು, ಹಸಿವು ಮುಕ್ತ ಭಾರತದ ಚಿಂತನೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಈ ದಿಸೆಯಲ್ಲಿ ಆಲೋಚನೆ ನಡೆಸಿ ದೇಶದಲ್ಲಿ ಮೊದಲ ಬಾರಿಗೆ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಪಡಿತರ ಚೀಟಿಯ ಸಮಸ್ಯೆಯ ಪರಿಹಾರಕ್ಕೆ ಆದ್ಯತೆ ನೀಡಿದೆ. ಸಾರ್ವಜನಿಕ ಆರೋಪಗಳು ಕಂಡು ಬಂದಾಗ ಯಾವುದೆ ಹಿಂಜರಿಕೆ ಇಲ್ಲದೆ ಸೂಕ್ತ ತನಿಖಾ ಸಂಸ್ಥೆಗಳಿಗೆ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸುವ ಇಚ್ಚಾ ಶಕ್ತಿ ತೋರಿದೆ.
ಪಂಚಾಯತ್ ರಾಜ್ ಕಾಯಿದೆಯ ಮೂಲಕ ಅಧಿಕಾರ ವಿಕೇಂದ್ರಿಕರಣದ ಇಚ್ಚಾ ಶಕ್ತಿ ತೋರಿದ್ದು ಕಾಂಗ್ರೆಸ್ ಸರ್ಕಾರ. ಸರ್ಕಾರ ಸವಲತ್ತುಗಳು ಸಮಾಜದ ತಳ ಮಟ್ಟದ ವ್ಯಕ್ತಿಗೂ ದೊರಕಬೇಕು ಎಂದಾದರೆ ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳು ಸಮರ್ಥರಾಗಿರಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡುವುದರಿಂದ ರಾಜ್ಯ ಸರ್ಕಾರದ ಜನಪರ ಯೋಜನೆಗಳು ಜನರಿಗೆ ತಲುಪಲು ಸಹಕಾರಿಯಾಗುತ್ತದೆ ಎಂದು ನುಡಿದರು. ಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಸಿದ್ದಾರ್ಥ ಪತ್ರಿಕಾಗೋಷ್ಠಿಯಲ್ಲಿ ಇದ್ದರು.