ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತ ಗುರುರಾಜ್ ಪೂಜಾರಿ ಗೆ ಕುಂದಾಪುರ , ಕೊಲ್ಲೂರಿನಲ್ಲಿ ಸ್ವಾಗತ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕಾಮನ್‌ವೆಲ್ತ್ ಗೇಮ್ಸ್‌ನ ಪಂದ್ಯಾಟದಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿಯ ಸ್ಥಾನ ಪಡೆದುಕೊಂಡು ಹುಟ್ಟೂರಿಗೆ ಹಿಂತಿರುಗಿದ ವಂಡ್ಸೆ ಜಡ್ಡಿನ ಗುರುರಾಜ್ ಪೂಜಾರಿ ಅವರಿಗೆ ಕುಂದಾಪುರ , ವಂಡ್ಸೆ ಹಾಗೂ ಕೊಲ್ಲೂರಿನ ನಾಗರೀಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಕುಂದಾಪುರ ತಾಲೂಕು ಆಡಳಿತ ಕೊಲ್ಲೂರು ದೇವಸ್ಥಾನದ ವತಿಯಿಂದ ಗುರುರಾಜ್ ಪೂಜಾರಿ ಅವರನ್ನು ಗೌರವಿಸಲಾಯಿತು.

ಕೊಲ್ಲೂರು ಶ್ರೀ ಮೂಕಾಂಬಿಕಾ ಫ್ರೌಡಶಾಲೆ ಹಾಗೂ ಕಾಲೇಜಿನಲ್ಲಿ 5 ವರ್ಷ ವಿದ್ಯಾಭ್ಯಾಸ ಕಲಿಕೆಯ ಜತೆಗೆ ಇಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಗಂಜಿ ಊಟಮಾಡಿ ಕುಸ್ತಿ, ಕಬಡ್ಡಿ ಹಾಗೂ ಇತರ ಕ್ರೀಡೆ ಕಲಿತಿರಿರುವುದರಿಂದ ಇಂದು ಈ ಮಟ್ಟಕ್ಕೇರಲು ಸಹಕಾರಿಯಾಯಿತು. ತಾಯಿ ಮೂಕಾಂಬಿಕೆಯ ಆಶೀರ್ವಾದ ಹಾಗೂ ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಮುಂದಿನ ಒಲಿಂಪಿಕ್ಸ್‌ನಲ್ಲಿಯೂ ಪದಕದ ಬೇಟೆ ಮುಂದುವರಿಸುತ್ತೇನೆ.

ಮನದಿಂಗಿತ ವ್ಯಕ್ತಪಡಿಸಿದ ಕ್ರೀಡಾಪಟು:
ಹಿಂದೆ ನಾನು ಮೂರು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮೂರು ಪದಕಗಳನ್ನು ಪಡೆದುಕೊಂಡಾಗ ಯಾವುದೆ ಅಭಿಮಾನವನ್ನು ಪ್ರಕಟಿಸದೆ ಇದ್ದ ಹಲವಾರು ಮಂದಿ ಇದೀಗ ಅಭಿಮಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೆದ್ದ ಎತ್ತಿನ ಬಾಲ ಹಿಡಿದರು ಎಂಬಂತೆ ಆಗಿದೆ. ಹಿಂದೆ ನಡೆದ ಕ್ರೀಡಾಕೂಟಗಳ ಕುರಿತು ಪ್ರಚಾರಗಳು ಕಡಿಮೆಯಾಗಿದ್ದರಿಂದ ಹಾಗೂ ಸಣ್ಣ ಮಟ್ಟದ ಕ್ರೀಡಾಕೂಟಗಳು ಎನ್ನುವ ಕಾರಣಕ್ಕಾಗಿ ನನಗೆ ಸರಿಯಾದ ರೀತಿಯ ಸಪೋರ್ಟ್ ದೊರಕಿರಲಿಲ್ಲ.

ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಪ್ರಥಮ ಪದಕ ನನ್ನಿಂದ ಬಂದಿದೆ ಎನ್ನುವ ಕಾರಣಕ್ಕಾಗಿ ದೇಶದ ಎಲ್ಲಡೆಯಿಂದ ಅಭಿಮಾನದ ಮಹಾಪೂರವೇ ಬರುತ್ತಿರುವುದು ನನಗೆ ಖುಷಿ ತಂದಿದೆ. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಸೇರಿದಂತೆ ೫ ಅಂತರಾಷ್ಟ್ರೀಯ ಪಂದ್ಯಾ ಕೂಟಗಳಲ್ಲಿ ಪ್ರತಿನಿಧಿಸಿ ಸಾಧನೆ ಮಾಡಿದ್ದಲ್ಲಿ ಮುಂದೆ ಒಲಂಪಿಕ್ ಕ್ರೀಡಾಕೂಟಕ್ಕೆ ಹೋಗುವ ಅವಕಾಶಗಳು ಇದೆ. ಒಲಂಪಿಕ್ ಸಾಧನೆ ಮಾಡುವವರೆಗೂ ತಾನು ವಿರಮಿಸುವುದಿಲ್ಲ ಎಂದು ಹೇಳಿದರು.

ಈಚೆಗೆ ನಡೆದ ಕಾಮನ್‌ವೆಲ್ತ್ ಗುರುರಾಜ್ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಪಡೆದುಕೊಂಡಿದ್ದ ಅವರ ಶಾಲಾ ಶಿಕ್ಷಕರು, ಸಹಪಾಠಿಗಳು ಹಾಗೂ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ದೇವಸ್ಥಾನದಲ್ಲಿ ಸೇರಿದ್ದರು. ಕುಂದಾಪುರದಿಂದ ಆಗಮಿಸಿದ ಬೆಳ್ಳಿಯ ಪದಕ ವೀರನಿಗೆ ಶುಭಾಶಯಗಳನ್ನು ಹೇಳಿ ಸಂತಸ ಹಂಚಿಕೊಂಡರು. ಕುಟುಂಬಿಕರು ಹಾಗೂ ಸ್ನೇಹಿತರೊಂದಿಗೆ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದ ಅವರು ಅರ್ಚಕರ ಮೂಲಕ ಪೂಜೆ ಸಲ್ಲಿಸಿದರು.

 

Leave a Reply

Your email address will not be published. Required fields are marked *

6 + 12 =