ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಾರಂತರು ಪ್ರಕೃತಿಯೊಂದಿಗೆ ಬದುಕಿದವರು ಅವರು ಬದುಕಿದ ರೀತಿ, ಸಾಗಿದ ದಾರಿ ನಮಗೆಲ್ಲಾ ಅನುಕರಣೀಯ, ಅವರು ನೀಡಿದ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಡಾ. ಶಿವರಾಮ ಕಾರಂತರ ಮಗಳು ಕ್ಷಮಾ ರಾವ್ ಅವರು ಹೇಳಿದರು.
ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್(ರಿ) ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17 ನೇ ವರುಷದ ಸಂಭ್ರಮದ ಸಾಹಿತ್ಯಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದಲ್ಲಿ ನುಡಿ ಚೇತನದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲಾ ಸೋಮಶೇಖರ್ ಅವರು ಕಾರಂತರು ನಮಗಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ, ಅವರ ಸಾಧನೆಯ ಸ್ಪೂರ್ತಿ ನಾವು ಪಡೆದುಕೊಂಡು ಕಾರಂತರಂತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಅವರು ನಿರೂಪಿಸಿದರು.