ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಫೆ.02: ತಾಲೂಕಿನ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಎಂಬ್ಯಾಕ್’ಮೆಂಟ್ ಬಳಿ ಸಂಜೆ ನಡೆದ ಇನ್ನೋವಾ ಕಾರು ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಬೆಂಗಳೂರಿನ ಆರ್. ವಿಜಯ್ ಎಂಬುವವರ ಏಕೈಕ ಪುತ್ರ ಅಕ್ಷಯ್ (23) ಮೃತ ದುರ್ದೈವಿ. ಅಪಘಾತದಲ್ಲಿ ತೇಜಸ್ (24), ಹರ್ಷ (24), ಪವನ್ (23) ಗಾಯಗೊಂಡಿದ್ದಾರೆ.
ಹೊನ್ನಾವರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ಕಿರಿಮಂಜೇಶ್ವರ ಎಂಬ್ಯಾಕ್’ಮೆಂಟ್ ಬಳಿ ಬೈಕ್ ಸವಾರ ಏಕಾಏಕಿ ಅಡ್ಡ ಬಂದಿದ್ದರಿಂದ ಇನ್ನೋವಾ ಚಾಲಕ ನಿಯಂತ್ರಣ ಕಳೆದುಕೊಂಡು ಡಿವೈಡರ್ ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ಡಿವೈಡರ್ ಹತ್ತಿ ಮತ್ತು ರಸ್ತೆಯಲ್ಲಿ ತಿರುಗಿ ನಿಂತಿತ್ತು. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅಕ್ಷಯ್ ತಲೆ ಹೊರಗೆ ಬಂದು ಕಂಬಕ್ಕೆ ಡಿಕ್ಕಿಯಾದ ಮುಖದ ಭಾಗಿ ಸಂಪೂರ್ಣ ಹಾನಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ನಾಲ್ವರು ಬಾಲ್ಯ ಸ್ನೇಹಿತರಾಗಿದ್ದು, ಸಹಪಾಠಿಗಳೂ ಆಗಿದ್ದರು. ತೇಜಸ್ ಎಂಬಾತನ ಇನ್ನೋವಾ ಕಾರಿನಲ್ಲಿ ಫೆ.26ರಂದು ಬೆಂಗಳೂರಿನಿಂದ ಹೊನ್ನಾವರಕ್ಕೆ ತೆರಳಿ ಅಲ್ಲಿಂದ ವಿವಿಧೆಡೆ ಪ್ರವಾಸ ಮುಗಿಸಿ ಬುಧವಾರ ಸಂಜೆ ಹೊನ್ನಾವರದಿಂದ ಮರಳಿ ಬೆಂಗಳೂರಿಗೆ ತೆರಳುತ್ತಿದ್ದರು.
ಬೈಂದೂರು ಪೊಲೀಸ್ ಉಪನಿರೀಕ್ಷಕ ಪವನ್ ನಾಯಕ್ ಹಾಗು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ವಾಹನ, ಟ್ರಾಫಿಕ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆಪತ್ಬಾಂಧವ ಆಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಹಾಗೂ ತಂಡ ಗಾಯಾಳುಗಳು ಹಾಗೂ ಮೃತದೇಹವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.