ಕುಂದಾಪುರದಲ್ಲಿ ಎ.1ರಿಂದ ಸಾಧನ ಕಿಶೋರ ವಿಕಾಸ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಾಧನ ಕಲಾಸಂಗಮ ಸಂಸ್ಥೆಯು ಕಲಾಸಕ್ತರ ಆಸಕ್ತಿಗಳಿಗನುಗುಣವಾಗಿ ಹೊಸತನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ ಹೊಸ ವಿಷಯಗಳೊಂದಿಗೆ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಏಪ್ರಿಲ್ 1 ರಿಂದ ಮೇ4 ರವರೆಗೆ ನಾಲ್ಕು ಹಂತಗಳಲ್ಲಿ ವಿಶೇಷ ಸಾಧನ ಕಿಶೋರ ವಿಕಾಸ ಶಿಬಿರಗಳನ್ನು ಹಮ್ಮಿಕೊಂಡಿದೆ.

ಮೊದಲ ಬಾರಿಗೆ ‘ರಂಗಾಂತರಂಗ’ ನಾಟಕ ತರಬೇತಿ ಶಿಬಿರವು ಹಮ್ಮಿಕೊಂಡಿದ್ದು, ಎಪ್ರಿಲ್ 1ರಿಂದ ಎಪ್ರಿಲ್ 9ರವರೆಗೆ 9 ದಿನಗಳ ಕಾಲ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 3ರ ವರೆಗೆ ಶಿಬಿರ ನಡೆಯಲಿದೆ. 9 ವರ್ಷದಿಂದ ಮೇಲ್ಪಟ್ಟ ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು, ಹಾಡು, ಹರಟೆ, ರಂಗದ ಒಳ ಮತ್ತು ಹೊರಗಣ ಮಾಹಿತಿ, ಸಂಭಾಷಣೆ, ನಿರೂಪಣೆಗಳ ಜೊತೆಗೆ ನಾಟಕ ಸಿದ್ಧಪಡಿಸಿ ಪ್ರದರ್ಶನ ನೀಡಲಾಗುತ್ತದೆ. ಗರಿಷ್ಟ 30 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ರಂಗ ತಜ್ಞ ಸಂತೋಷ್ ಕುಮಾರ್ ನಾಯಕ್ ಪಟ್ಲ ಹಾಗೂ ಸಂಯೋಜಕಿಯಾಗಿ ಮಧುಸ್ಮಿತಾ ಜಯಶೇಖರ್ ಭಾಗವಹಿಸಲಿದ್ದಾರೆ.

ಎಪ್ರಿಲ್ 12ರಿಂದ 23ರ ವರೆಗೆ ‘ವ್ಯಕ್ತಿತ್ವ ವಿಕಸನ, ಆರ್ಟ್ ಮತ್ತು ಕ್ರಾಪ್ಟ್ ಶಿಬಿರ’ ನಡೆಯಲಿದ್ದು, ಬೆಳಿಗ್ಗೆ 9:30ರಿಂದ 12:30ರ ವರೆಗೆ ಭಾನುವಾರ ಹೊರತುಪಡಿಸಿ 10 ದಿನಗಳ ಕಾಲ ನಡೆಯಲಿದೆ. 5ವರ್ಷದಿಂದ 15 ವರ್ಷದವರೆಗಿನ ವಯೋಮಿತಿಯನ್ನು ನಿಗಧಿಪಡಿಸಲಾಗಿದ್ದು, ಗರಿಷ್ಟ 40 ಶಿಬಿರಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ದೈನಂದಿನ ಶ್ಲೋಕಗಳು, ಹಾಡು, ಹರಟೆ, ವಿವಿಧ ಚಿತ್ರಕಲೆಗಳ ಪ್ರಾತ್ಯಕ್ಷಿಕೆ, ವರ್ಲಿ, ಜಲವರ್ಣ, ಪೆನ್ಸಿಲ್, ಕಾರ್ಟೂನ್, ವಿವಿಧ ಶೈಲಿಯ ಕ್ರಾಪ್ಟ್, ಟೀ ಶರ್ಟ್ ಪೈಂಟಿಂಗ್, ಬಲೂನ್ ಆರ್ಟ್, ಟ್ಯಾಟೂ, ಮೆಹಂದಿ, ಮುಖವರ್ಣಿಕೆ, ಪ್ರತಿಭಾನ್ವೇಷಣೆ, ಕಥಾ ರಚನೆ ಮೊದಲಾದ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಈ ಶಿಬಿರದಲ್ಲಿ ಅವಕಾಶವಿದ್ದು, ಕು. ಅವ್ಯಕ್ತ ಹಾಗೂ ಕು. ಮೇಘನಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಎಪ್ರಿಲ್ 15ರಿಂದ ಮೇ ೪ರವರೆಗೆ ಏಳು ವರ್ಷದಿಂದ ಮೇಲ್ಪಟ್ಟ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗಾಗಿ ಯೋಗಾಸನ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ದಿನವೂ ಬೆಳಿಗ್ಗೆ 6:30ರಿಂದ 8:30ರ ವರೆಗೆ ನಡೆಯಲಿರುವ ಈ ಶಿಬಿರದಲ್ಲಿ 20 ಶಿಬಿರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕು. ರಾಧಿಕಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ.

ಎಪ್ರಿಲ್ 29ರಿಂದ ಮೇ 4ರವರೆಗೆ ಸಂಜೆ 4ರಿಂದ 6:30ರವರೆಗೆ ಎಲ್ಲಾ ವಯೋಮಾನದವರಿಗೆ ಅನುಕೂಲವಾಗುವಂತೆ ಪಾಶ್ಚಾತ್ಯ ಸಂಗೀತ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅನಜ್ ಹಾಗೂ ಸಂಗಡಿಗರು ಭಾಗವಹಿಸಲಿದ್ದು. ಗಿಟಾರ್, ಪಿಯಾನೋ, ಪಾಶ್ಚಾತ್ಯ ಹಾಡುಗಾರಿಕೆ, ಪ್ರಾತ್ಯಕ್ಷಿಕೆ ಹಾಗೂ ಪ್ರಾಥಮಿಕ ತರಬೇತಿ ನೀಡಲಾಗುತ್ತದೆ. ಶಿಬಿರಗಳಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಸಾಧನ ಕಲಾ ಸಂಗಮ (ರಿ) ಕುಂದಾಪುರ, ಸಾಧನ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ, ೩ನೇ ಮಹಡಿ, ಶ್ರೀ ಕೃಷ್ಣ ಭವನ, ಕಾರ್ಪೋರೇಷನ್ ಬ್ಯಾಂಕಿನ ಮೇಲಿನ ಮಹಡಿ, ಪುರಸಭೆ ರಸ್ತೆ, ಕುಂದಾಪುರ 576201 ವಿಳಾಸವನ್ನು ಸಂಪರ್ಕಿಸಬಹುದು. ಅಥವಾ 08254234950 ಅಥವಾ 9448121950 ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋದಾಯಿಸಿಕೊಳ್ಳಬಹುದು ಎಂದು ಸಾಧನ ಕಲಾ ಸಂಗಮದ ಕಾರ್ಯನಿರ್ವಾಹಕ ವಿಶ್ವಸ್ಥ ನಾರಾಯಣ ಐತಾಳ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

10 + 3 =