ಕುಂದಾಪುರದಲ್ಲಿ ಘರ್ಜಿಸಿದ ನವರಾತ್ರಿ ಹುಲಿಗಳು!

ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಕಾಲ ಉರುಳಿದ ಹಾಗೇ ನಮ್ಮ ಆಸಕ್ತಿಯೂ ಬದಲಾಗುತ್ತದೆ. ಹೊಸತನಕ್ಕೆ ತುಡಿಯುವ ಈ ಬದಲಾವಣೆಯೊಂದಿಗೆ ನಮ್ಮ ಕಲೆ, ಸಂಸ್ಕೃತಿ ಸಂಪ್ರದಾಯಗಳ ಪೈಕಿ ಕೆಲವು ಹೊಸ ಆಯಾಮ ಪಡೆದು ಮತ್ತೆ ನಮ್ಮ ಮುಂದೆ ಬಂದರೆ, ಇನ್ನು ಕೆಲವು ಮರೆಯಾಗಿಬಿಡುತ್ತವೆ. ಆದರೆ ಅಪರೂಪಕ್ಕೊಂದು ಸಂಸ್ಥೆಗಳು ಈ ಮರೆಯಾಗುವ ಕಲೆಗಳಿಗೆ ಮರುಜೀವ ತುಂಬುವ ಪ್ರಯತ್ನವನ್ನು ಮಾಡುತ್ತಲೇ ಬರುತ್ತವೆ.

ಹೌದು. ಕಲಾಕ್ಷೇತ್ರ ಕುಂದಾಪುರ ಅಂಥಹದ್ದೊಂದು ಭಿನ್ನ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಕಳೆದ ಕೆಲವು ವರ್ಷಗಳಿಂದ ಆಯೋಜಿಸುತ್ತಿದೆ. ಹಿಂದೆಲ್ಲ ನವರಾತ್ರಿಯ ಸಮಯದಲ್ಲಿ ರಾತ್ರಿಯ ವೇಳೆಗೆ ಹೆಚ್ಚಾಗಿ ಕಂಡುಬರುತ್ತಿದ್ದ ಹುಲಿವೇಷ ಇಂದು ಕುಂದಾಪುರ ಭಾಗದಲ್ಲಿ ಅಪರೂಪವೆನಿಸಿಕೊಳ್ಳುತ್ತಿರುವುದಲ್ಲದೇ, ವ್ಯಾವಹಾರಿಕ ತಿರುವನ್ನು ಪಡೆದಿದೆ. ಹೊಸಬರು ಬರುತ್ತಿಲ್ಲ. ಕಲಿಯುವವರ್ಯಾರು, ಕುಣಿಯುವವರ್ಯಾರು ಪ್ರಶ್ನೆ. ಕುಣಿದರೂ ಅದು ಪಟ್ಟಣ, ದನಿಗಳ ಮನೆಗಳಿಗಷ್ಟೇ ಸೀಮಿತವಾಗಿದೆ. ಹೀಗಿರುವಾಗ ಹಳೆಯ ದಿನಗಳನ್ನೊಮ್ಮೆ ಮೆಲಕು ಹಾಕಿದರೆ ಎಷ್ಟು ಚಂದವಿರುತ್ತೆಂಬ ಆಲೋಚನೆಯೊಂದಿಗೆ ಆಯೋಜಿಸಿದ ಹುಲಿವೇಷ ಕುಂದಾಪುರ ಮಟ್ಟಿಗೆ ವಿಶೇಷವಾಗಿಯೇ ಮೂಡಿಬಂದಿತ್ತು. (ಕುಂದಾಪ್ರ ಡಾಟ್ ಕಾಂ ವರದಿ)

ನವರಾತ್ರಿಯ ಎಲ್ಲಾ ವೇಷಗಳ ಪೈಕಿ ವಿಭಿನ್ನ ಮೆರಗು ನೀಡುವ ಹುಲಿವೇಷದ ತಯಾರಿ ಸುಲಭವಾದುದಲ್ಲ. ವ್ಯಕ್ತಿಯ ದೇಹಧಾರ್ಡ್ಯತೆ, ವಾದ್ಯಗೋಷ್ಠಿ ಎಲ್ಲವೂ ಚನ್ನಾಗಿಯೇ ಇರಬೇಕು. ಉತ್ತಮ ತಯಾರಿಯೂ ಬೇಕು. ಬಣ್ಣ ಬಳಿದುಕೊಳ್ಳುವವರಿಗೆ ಅದನ್ನು ತಡೆದುಕೊಳ್ಳುವ ಶಕ್ತಿಯೂ ಇರಬೇಕು. ಇಷ್ಟಾದ ಮೇಲೆಯೇ ವಾದ್ಯದ ಲಯಕ್ಕೆ ತಕ್ಕಂತೆ ಕುಣಿದರೆ ಅದೊಂದು ಅದ್ಭುತವಾದ ಕಲಾಸೃಷ್ಠಿಯಾದಂತೆಯೇ ಸರಿ. (ಕುಂದಾಪ್ರ ಡಾಟ್ ಕಾಂ ವರದಿ)

ಯಾರು ಏನೇ ಹೇಳಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹುಲಿವೇಷ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಹುಲಿವೇಷವನ್ನು ಆಯೋಜಿಸುತ್ತಿರುವ ಕಲಾಕ್ಷೇತ್ರ ಈ ಭಾರಿ ಬೈರ್ಡ್ ಹೈಸ್ಕೂಲ್ ಮೈದಾನದಲ್ಲಿ ಹುಲಿವೇಷ ಪ್ರದರ್ಶನ ಏರ್ಪಡಿಸಿದ್ದು ಒಂದು ಸಾರ್ಥಕ ಪ್ರಯತ್ನವೇ ಸರಿ. (ಕುಂದಾಪ್ರ ಡಾಟ್ ಕಾಂ ವರದಿ)

ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಅವರೊಂದಿಗೆ ಸಾಧನ ಕಲಾ ಸಂಸ್ಥೆಯ ನಾರಾಯಣ ಐತಾಳ್ ಅವರ ಬಳಗದ ಕಲಾವಿದರು ಮಕ್ಕಳಿಗೆ ಮುಖವರ್ಣಿಕೆಯನ್ನು ಮಾಡುವ ಮೂಲಕ ಹುಲಿವೇಷದ ಬಗೆಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡಿದ್ದರು.

 

 

Leave a Reply

Your email address will not be published. Required fields are marked *

5 × three =