ಕುಂದಾಪುರ: ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿ ಹುತಾತ್ಮರಾದವರನ್ನು ಸ್ಮರಿಸಿ ಗೌರವ ಸಲ್ಲಿಸುವುದು ದೇಶದ ಪ್ರತಿ ಪ್ರಜೆಯ ಕರ್ತವ್ಯ. ಅವರ ತ್ಯಾಗ ಬಲಿದಾನಗಳಿಂದಾಗಿ ಇಂದು ನಾವು ದೇಶದಲ್ಲಿ ನೆಮ್ಮದಿಯಿಂದ ಬದುಕುವಂತಾಗಿದೆ. ಅದರ ಪ್ರತಿಯೊಬ್ಬರಿಗೂ ನೆನಪಿಸುವಂತಾಗಬೇಕು ಎಂದು ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ ಹೇಳಿದರು.
ಕುಂದಾಪುರದ ಗಾಂಧಿ ಪಾರ್ಕ್‌ನಲ್ಲಿ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ, ಪೊಲೀಸ್ ಠಾಣೆ ಕುಂದಾಪುರ, ಲಯನ್ಸ್ ಕ್ಲಬ್ ಹಂಗಳೂರು ಹಾಗೂ ಬಂಡಿಕಡು ಬೊಬ್ಬರ್ಯ ಸೇವಾ ಸಂಘ ಕೋಟೇಶ್ವರದ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.
ಉದ್ಯಮಿ ಕೆ.ಆರ್. ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನಿರೀಕ್ಷಕ ನಾಸೀರ್ ಹುಸೇನ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬಂಡಿಕಟು ಬೊಬ್ಬರ್ಯ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ನೆಹರು ಯುವಕೇಂದ್ರದ ಜಿಲ್ಲಾ ಸಲಹೆಗಾರ ನರಸಿಂಹ ಗಾಣಿಗ ಸ್ವಾಗತಿಸಿ, ವಕೀಲ ರಾಘವೇಂದ್ರ ಚರಣ ನಾವಡ ನಿರೂಪಿಸಿದರು.