ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಕಡಿಮೆ ಸಂಬಳದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಆ ಸಂಬಳವನ್ನೂ ಮೂರು ತಿಂಗಳಿನಿಂದ ನೀಡದೆ ಸತಾಯಿಸುತ್ತಿರುವುದಲ್ಲದೇ ನಮ್ಮ ಬೇಡಿಕೆಗಳಿಗೂ ಸರಕಾರ ಕಿವಿಗೊಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ತರಗತಿ ಪಾಠಗಳನ್ನು ನಿಲ್ಲಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ಹೇಳಿದರು.
ಕುಂದಾಪುರ ಮಿನಿ ವಿಧಾನಸೌಧದ ಎದುರು ಅತಿಥಿ ಉಪನ್ಯಾಸಕರ ಬಾಕಿ ಇರುವ ಸಂಬಳ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಹಾಗೂ ಕುಂದಾಪುರ ತಾಲೂಕು ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಅತಿಥಿ ಉಪನ್ಯಾಸಕರುಗಳು ಹಲವಾರು ವರ್ಷಗಳಿಂದ ಸೇವೆಯಲ್ಲಿದ್ದರೂ ಅವರನ್ನು ಸೇವಾ ಭದ್ರತೆ ಕಾಡುತ್ತಿದೆ. ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ ತಿಂಗಳಿಗೆ ಇಪ್ಪತ್ತೈದು ಸಾವಿರ ವೇತನ ನಿಗದಿಪಡಿಸಬೇಕು ಹಾಗೂ ಖಾಯಂಗೊಳಿಸುವವರೆಗೆ ಅವರ ಸೇವಾ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿ ಕ್ಲಪ್ತ ಸಮಯದಲ್ಲಿ ವೇತನ ನೀಡುವ ವ್ಯವಸ್ಥೆಯಾಗಬೇಕು ಎಂದವರು ಆಗ್ರಹಿಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಬಳಿಕ ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕುಂದಾಪುರ ತಾಲೂಕು ಅಧ್ಯಕ್ಷ ಮಣಿಕಂಠ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗೇಶ್, ತಾಲೂಕು ಕಾರ್ಯದರ್ಶಿ ಗುಲಾಬಿ ಮಧುಸೂದನ್, ರವಿಚಂದ್ರ, ಸುಬ್ರಮಣ್ಯ ಮೊದಲಾದವರು ಉಪಸ್ಥಿತರಿದ್ದರು.