ಕುಂದಾಪುರ: ಶಾಂತಿ, ಸಹಬಾಳ್ವೆ, ಸಮಾನತೆ, ಐಖ್ಯತೆ ಮೂಲಕ ದೇಶದ ಅಭಿವೃದ್ಧಿ ಆಗಬೇಕಿದೆ. ಭಾರತ ಸಾಂಸ್ಕೃತಿ, ಸಂಸ್ಕಾರಯುತವಾಗಿದ್ದು, ಸೌಹಾರ್ದತೆ ತಳಹದಿಯಲ್ಲಿ ದೇಶದ ಅಭಿವೃದ್ಧಿ ರಥದ ಚಕ್ರ ಹೊರಳಬೇಕು ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ಅಶ್ವಥಿ ಎಸ್. ಹೇಳಿದರು.
ಕುಂದಾಪುರ ತಾಲೂಕ್ ಆಡಳಿತ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ದ್ವಜಾಹೋರಣ ನೆವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಭಾರತ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ದೇಶಕ್ಕೆ ಡಾ.ಅಂಬೇಡ್ಕರ್ ಕೊಟ್ಟ ಸಂವಿಧಾನ ವಿಶ್ವಮಾನ್ಯ. ಅಂಬೇಡ್ಕರ್ ಸಾರಿದ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ದೇಶ ಕಟ್ಟುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಭಾರತೀಯರ ಭಾವನಾತ್ಮಕವಾಗಿ ಒಂದಾಗಿರಲಿಲ್ಲ ಎಂದ ಅವರು, ಗಣರಾಜ್ಯೋತ್ಸವ ಭಾರತೀಯರನ್ನು ಭಾವನಾತ್ಮಕವಾಗಿ ಬೆಸೆದಿದೆ. ಸಮಾನತೆ, ಸೌಹಾರ್ದತೆ, ಸಹಬಾಳ್ವೆ ಮೂಲಕ ಐಖ್ಯತೆ ಸಾರಬೇಕು ಎಂದು ಹೇಳಿದರು. ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್., ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಾಕೋಬ್ ಡಿಸೋಜಾ, ಪುರಸಭೆ ಸದಸ್ಯರಾದ ಗುಣರತ್ನಾ, ದೇವಕಿ ಸಣ್ಣಯ್ಯ, ಪುಷ್ಪಾ ಶೇಟ್, ಡಿಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ತಾಪಂ.ಇಓ ನಾರಾಯಣ ಸ್ವಾಮಿ, ಅಕ್ಷರದಾಸೋಹ ಅಧಿಕಾರಿ ಸೀತಾರಾಮ ಶೆಟ್ಟಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.
ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯ್ಕ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್.ಶೆಟ್ಟಿ ವಂದಿಸಿದರು.
ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಮಾರ್ಗದರ್ಶನದಲ್ಲಿ ಕುಂದಾಪುರ ಪಿಎಸ್ಸೈ ನಾಸೀರ್ ಹುಸೇನ್ ನೇತೃತ್ವದಲ್ಲಿ, ಪೊಲೀಸ್, ಅಗ್ನಿ ಶಾಮಕ ದಳ, ಎನ್ಸಿಸಿ, ಸ್ಕೌಟ್ ಎಂಡ್ ಗೈಡ್ ದಳಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.