ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ, ಪ್ರತ್ಯೇಕ ಜಿಲ್ಲೆಗೆ ಬೇಡಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕುಂದೇಶ್ವರ ದೇಗುಲದ ಹಾಲ್‌ನಲ್ಲಿ ಕುಂದಗನ್ನಡ ಜಿಲ್ಲೆ ಸ್ಥಾಪನೆ ಕುರಿತು ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರ ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಭೆ ಇತ್ತಿಚೆಗೆ ನಡೆಯಿತು.

ಮಾಜಿ ಶಾಸಕರ ನೇತೃತ್ವದಲ್ಲಿ ಸಭೆ ನಡೆದು ಸಮಿತಿ ಕೂಡ ಅವರದ್ದೇ ನೇತೃತ್ವದಲ್ಲಿ ರೂಪಿಸಲಾಗಿದೆ. ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕರಾಗಿ ಮುಂಬಾರು ದಿನಕರ ಶೆಟ್ಟಿ, ಜಿಲ್ಲಾ ಹೋರಾಟ ಸಮಿತಿ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಪಂ ಮಾಜಿ ಸದಸ್ಯ ಗಣಪತಿ ಶ್ರೀಯಾನ್, ಜಿಲ್ಲಾ ಹೋರಾಟ ಸಮಿತಿ ವೇದಿಕೆಯ ಉಪಾಧ್ಯಕ್ಷರಾಗಿ ದಸ್ತಗೀರಿ ಸಾಹೇಬ್ ಕಾವ್ರಾಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸತೀಶ್ ನಾಯ್ಕ್ ನಾಡಗುಡ್ಡೆಯಂಗಡಿ, ನವೀನ ಚಂದ್ರ ಶೆಟ್ಟಿ ಬೆಳ್ಳೂರು, ರತ್ನಾಕರ ಶೆಟ್ಟಿ ಆವರ್ಸೆ, ಚಿಟ್ಟೆ ರಾಜಗೋಪಾಲ ಹೆಗ್ಡೆ, ವಿನಯ ಶೇಟ್ ಕಾವ್ರಾಡಿ, ಕೆ. ಆರ್. ನಾಯ್ಕ್ ಹಂಗಳೂರು ಡಾ. ಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಹರ್ಕೂರು ಅವರನ್ನು ಸಮೀತಿಗೆ ನೇಮಕ ಮಾಡಿಕೊಳ್ಳಲಾಯಿತು.

ಚಿಟ್ಟೆ ರಾಜಗೋಪಾಲ ಹೆಗ್ಡೆ ಮಾತನಾಡಿ, ಭಟ್ಕಳ ಶಾಸಕ ಸುನೀಲ್ ನಾಯ್ಕ್ ಅವರ ಜತೆ ಈಗಾಗಲೇ ೨, ೩ ಬಾರಿ ಮಾತನಾಡಿದ್ದು, ಭಟ್ಕಳ ತಾಲೂಕಿಗೆ ಅದರ ಜಿಲ್ಲಾ ಕೇಂದ್ರವಾದ ಕಾರವಾರ ೧೭೮ ಕಿ. ಮೀ ದೂರವಿದೆ ಭಟ್ಕಳ ಜನತೆ, ಶಾಸಕರು ಭಟ್ಕಳವನ್ನು ಸೇರಿಸಿ ಕುಂದಾಪುರ ಜಿಲ್ಲೆ ರಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ನೂತನ ಕುಂದಾಪುರ ಜಿಲ್ಲೆ ರಚನೆ ಹೋರಾಟ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ಹಾಗೂ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆಯವರನ್ನು ಆಯ್ಕೆ ಮಾಡಿದ್ದು ಹೋರಾಟಕ್ಕೆ ಇನ್ನಷ್ಟು ಬಲ ತಂದಿದೆ ಎಂದರು.

ಸಂಚಾಲಕ ಮುಂಬಾರು ದಿನಕರ ಶೆಟ್ಟಿ ಮಾತನಾಡಿ, ಕುಂದಾಪುರ(ಕುಂದಗನ್ನಡ) ಜಿಲ್ಲೆ ರಚನೆಯಲ್ಲಿ ಕುಂದಾಪುರ ತಾಲೂಕು, ಬೈಂದೂರು ತಾಲೂಕು, ಪ್ರಸ್ತಾವಿಕ ಶಂಕರನಾರಾಯಣ ತಾಲೂಕು ಕೇಂದ್ರೀಕರಿಸಿ ಜಿಲ್ಲೆಗೆ ಹೋರಾಟ ಮಾಡಲಾಗುವುದು ಎಂದರು.

ಗಣಪತಿ ಶ್ರೀಯಾನ್ ದಸ್ತಗೀರಿ ಸಾಹೇಬ್, ನಾಡ ಸತೀಶ್ ನಾಯ್ಕ್, ಬಿ. ಅಪ್ಪಣ್ಣ ಹೆಗ್ಡೆ, ಅನಿಲ್ ಕುಮಾರ ಶೆಟ್ಟಿ ಕುಂದಾಪುರ ಜಿಲ್ಲೆ ರಚನೆ ಅನಿವಾರ್ಯ ಹಾಗೂ ಅಗತ್ಯದ ಕುರಿತು ಮಾತನಾಡಿದರು.

Leave a Reply

Your email address will not be published. Required fields are marked *

2 × three =