ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಾರಾಹಿ ಬಲದಂಡೆ ಯೋಜನೆ ಕಾಮಗಾರಿ ಆರಂಭಿಸದಿದ್ದರೆ ಎಡದಂಡೆ ಕಾಲುವೆಯಲ್ಲಿ ನೀರು ಹರಿಯೋದಕ್ಕೆ ಬಿಡೋದಿಲ್ಲ. ಕುಚ್ಚಲಕ್ಕಿ ಅನ್ನ ಊಟ ಮಾಡೋರಿಗೆ ಬೆಳ್ತಿಗೆ ಅಕ್ಕಿ ಅನ್ನಾ ಆಗಿಬರೋದಿಲ್ಲ! ಅರ್ಧ ವಾರ್ಷಿಕ ಪರೀಕ್ಷೆ ಬಂದರೂ ಬಟೆ, ಪುಸ್ತಕ ಪೂರೈಕೆ ಏಕಿಲ್ಲಾ? ಹಳ್ಳಿ ಶಾಲೆಗಳಲ್ಲಿ ಸಮಸ್ಯೆಗಳಿದ್ದರೂ ವಲಯ ಶಿಕ್ಷಣಾಧಿಕಾರಿ ಏಕೆ ಭೇಟಿ ಕೊಡೋದಿಲ್ಲ. ಸರಕಾರಿ ಜಾಗದಲ್ಲಿ ಬಹುಮಹಡಿ ಕಟ್ಟಡ ಕಟ್ಟಿದರೂ ಕ್ರಮ ಏಕೆ ಇಲ್ಲ. ಒಬ್ಬರೇ ಮೂರು ಮೂರು ಹುದ್ದೆಯಲ್ಲಿದ್ದರೂ ಸುಮ್ಮನಿರೋದು ಏಕೆ?
ಇದು ಕುಂದಾಪುರ ತಾಲೂಕು ಪಂಚಾಯತ್ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರು ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಪರಿ ಇದು.
ಕಂದಾಯ ಇಲಾಖೆ ಸಂಬಂಧಪಟ್ಟ ವಿಷಯ ಚರ್ಚೆಗಿದ್ದು, ತಹಸೀಲ್ದಾರ್ ಸಭೆಗೆ ಹಾಜರಾಗಿಲ್ಲ. ಮರಳು ಮಾಫಿಯಾ ಜೀವಭಯ ಒಡ್ಡುತ್ತಿದ್ದರೂ ಉತ್ತರ ಕೊಡಬೇಕಿದ್ದ ಗಣಿ ಇಲಾಖೆ ಅಧಿಕಾರಿಗಳ ಬಂದಿಲ್ಲ. ಅಧಿಕಾರಿಗಳು ಬಾರದಿದ್ದರೆ ಪ್ರಶ್ನೋತ್ತರ ಮುಂದುವರಿಯಲು ಬಿಡೋದಿಲ್ಲ. ಬಾವಿಗಿಳಿದು ಪ್ರತಿಭಟಸಬೇಕಾಗುತ್ತದೆ ಎಂದು ತಾಪಂ ಸದಸ್ಯ ಕರಣ್ ಪೂಜಾರಿ ಎಚ್ಚರಿಸಿದ ನಂತರ ತಹಸೀಲ್ದಾರ್, ಹಾಗೂ ಗಣಿ ಇಲಾಖೆ ಅಧಿಕಾರಿ ಸಭೆಗೆ ಬರುವಂತೆ ದೂರವಾಣಿ ಸಂದೇಶ ನಂತರ ತಹಸೀಲ್ದಾರ್ ಹಾಜರಾದರು.
ಶಂಕರನಾರಾಯಣ ತಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಮಾತನಾಡಿ, ವಾರಾಹಿ ಎಡದಂಡೆ ಯೋಜನೆ ಇನ್ನೂ ಆರಂಭಿಸಿಲ್ಲ. ಬಲದಂಡೆ ಅಚ್ಚಕಟ್ಟು ಪ್ರದೇಶ ಎತ್ತರ ಪ್ರದೇಶದಲ್ಲಿದ್ದು, ನೀರಿನ ಸಮಸ್ಯೆ ಇದೆ. ಮೂರು ಮೂರು ಬೆಳೆ ಬೆಳೆಯುತ್ತಿದ್ದ ರೈತರು ಒಂದು ಬೆಳೆಗೆ ಇಳಿದಿದ್ದಾರೆ. ಬಲದಂಡೆ ಕಾಮಗಾರಿ ಎಂದು ಆರಂಭಿಸುತ್ತೀರಿ. ಬಲದಂಡೆಯಲ್ಲಿ ವಾರಾಹಿ ನೀರು ಹರಿಸದಿದ್ದರೆ ಎಡದಂಡೆಯಲ್ಲಿ ನೀರು ಹರಿಯೋದಕ್ಕೆ ಬಿಡದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದು, ಸಂಬಂಧ ಪಟ್ಟ ಅಧಿಕಾರಿ ಸರಕಾರ ಅನುಮೋದನೆ ಕೊಟ್ಟ ಕೆಲಸ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಸರಕಾರದ ಮಾತೃಪೂರ್ಣ ಯೋಜನೆ ನಮ್ಮ ಜಿಲ್ಲೆಗೆ ಒಗ್ಗುವುದಿಲ್ಲ. ಯೋಜನೆ ಉದ್ಘಾಟನೆಯಲ್ಲಿ ಬೆರಳೆಣಿಕೆಯಷ್ಟು ಫಲಾನುಭವಿಗಳು ಊಟಮಾಡಿದ್ದು ಬಿಟ್ಟರೆ, ಮತ್ತೆ ಯಾರೂ ಊಟಕ್ಕೆ ಬರೋದಿಲ್ಲ. ಇಲ್ಲಿನ ಜನ ಕೊಚ್ಚಲಕ್ಕಿ ಅನ್ನ ಊಟ ಮಾಡುತ್ತಿದ್ದು, ಬೆಳ್ತಿಗೆ ಅಕ್ಕಿ ಅನ್ನ ಹಾಗೂ ಬೇಳೆ ಸಾರು ಗ್ಯಾಸ್ಟ್ರಬಲ್‌ಗೆ ಕಾರಣವಾಗುತ್ತಿದೆ. ಸರಕಾರ ಮಾತೃಪೂರ್ಣ ಯೋಜನೆ ಬದಲು ಹಿಂದೆ ಹೇಗೆ ಕಿಟ್ ಕೊಡುತ್ತಿದ್ದರೂ ಹಾಗೆ ಕಿಟ್ ವಿತರಿಸಲಿ. ನಮಗೆ ಮಧ್ಯಾಹ್ನ ಊಟ ಬೇಡ ಎಂದು ಫಲಾನುಭವಿಗಳು ಬರೆದುಕೊಟ್ಟಿದ್ದಾರೆ ಎಂದು ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಅಭಿಪ್ರಾಯಪಟ್ಟರು.
ಅಂಗನವಾಡಿಗೆ ಬಂದು ಬೆಳಗ್ಗೆ ಹಾಲು, ಮಧ್ಯಾಹ್ನ ಊಟಕ್ಕೆ ಹೋಗೋದ್ರಿಂದ ಕೆಲಸಕ್ಕೆ ಹೋಗೋದಕ್ಕೆ ಕಷ್ಟವಾಗುತ್ತದೆ. ಊಟಕ್ಕಾಗಿ ಕೆಲಸ ಬಿಟ್ಟು ಅಂಗನವಾಡಿ ಮನೆ ಅಂತ ಅಲೆಯೋಕೆ ಆಗೋದಿಲ್ಲ ಎಂದು ಫಲಾನುಭವಿಗಳು ಅವಲತ್ತು ಕೊಳ್ಳುತ್ತಿದ್ದಾರೆ. ಹಿಂದೆ ಸರಕಾರ ಹೇಗೆ ಪೌಷ್ಟಿಕ ಆಹಾರ ನೀಡುತ್ತಿತ್ತೋ ಅದನ್ನೇ ಮುಂದುವರಿಸಲಿ. ಸರಕಾರದ ಯೋಜನೆ ನಮ್ಮ ಜಿಲ್ಲೆಗೆ ಲಾಗೂ ಆಗೋದಿಲ್ಲ ಎಂದು ತಾಪಂ ಸದಸ್ಯರಾದ ವಾಸುದೇವ ಪೈ, ಜಗದೀಶ್ ದೇವಾಡಿಗ, ಇಂದಿರಾ ಶೆಟ್ಟಿ, ಕರಣ್ ಪೂಜಾರಿ, ಪುಷ್ಪರಾಜ್ ಶೆಟ್ಟಿ, ಜ್ಯೋತಿ ಪುತ್ರನ್, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ಜಾನಕಿ ಬಿಲ್ಲವ ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸದಸ್ಯರ ಅಭಿಪ್ರಾಯ ಕ್ರೋಢೀಕರಿಸಿ, ಸರಕಾರ ಹಿಂದಿನಂತೆ ಪೌಷ್ಟಿಕ ಆಹಾರ ಪೂರೈಕೆ ಮಾಡುವಂತೆ ನಿರ್ಣಯ ಮಾಡಿ, ಪ್ರತಿ ಸರಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸುವಂತೆ ಸೂಚಿಸಿದರು.
ಗ್ರಾಪಂ ಸದಸ್ಯತ್ವ ಹೊಂದಿದ್ದು ಮಹಿಳೆ ಬಿಸಿ ಊಟ ಹಾಗೂ ಆಶಾ ಕಾರ‍್ಯಕರ್ತೆ ಹುದ್ದೆ ನಿಭಾಯಿಸುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರ್, ಇಒ ಹಾಗೂ ಆರೋಗ್ಯಾಧಿಕಾರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಒಬ್ಬರೇ ಮೂರು ಹುದ್ದೆ ಅಲಂಕರಿಸುವ ಮೂಲಕ ಮತ್ತೊಬ್ಬರ ಅವಕಾಶದ ಹಕ್ಕು ಕಿತ್ತುಕೊಳ್ಳಲಾಗಿದೆ. ದೂರು ನೀಡಿದ ಅಧಿಕಾರಿಗಳು ಹಿಂಬರಹ ಕೊಡಿ. ನ್ಯಾಯಾಲಯದಲ್ಲಿ ವಿಷಯ ಪ್ರಸ್ತಾಪ ಮಾಡಲಾಗುತ್ತದೆ ಎಂದು ಪುಷ್ಪರಾಜ್ ಶೆಟ್ಟಿ ಒತ್ತಾಯಿದ್ದು, ಅಧಿಕಾರಿಗಳು ಹಿಂಬರಹ ಕೊಡುವ ಭರವಸೆ ನೀಡಿದರು.
ಹಳ್ಳಿಹೊಳೆ ಶಾಲೆಯಲ್ಲಿ ಇರುವ ಶಿಕ್ಷಕ ಪೊಕ್ಸೋ ಕಾಯಿದೆಯಲ್ಲಿ ಜೈಲು ಪಾಲಾಗಿದ್ದು, ೧೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರ ಭವಿಷ್ಯ ಅತಂತ್ರವಾಗಿದೆ. ಮತ್ತೊಬ್ಬ ಶಿಕ್ಷಕರು ಶಾಲೆಗೆ ಬಾರದೆ ತಿಂಗಳು ಕಳೆದರೂ ಹಾಜರಾತಿಗೆ ಸಹಿ ಹಾಕುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಇಲ್ಲ. ಗ್ರಾಮೀಣ ಭಾಗದ ಶಾಲೆಗಳಿಗೆ ಶಿಕ್ಷಣಾಧಿಕಾರಿ ಭೇಟಿ ನೀಡೋದಿಲ್ಲ ಎಂದು ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಆರೋಪಿಸಿದ್ದು, ಹಳ್ಳಿಹೊಳೆ ಶಾಲೆಗೆ ಭೇಟಿ ನೀಡಿದ್ದು, ಶಾಲೆಗೆ ಬಾರದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಪ್ರೋಸಸ್ ನಡೆಯುತ್ತಿದೆ. ಬೇರೊಬ್ಬ ಶಿಕ್ಷಕ ಆ ಶಾಲೆಗೆ ವರ್ಗ ಮಾಡಲಾಗಿದೆ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದರು.
ಲೈಸೆನ್ಸ್ ಇಲ್ಲದಿದ್ದರೂ ನಡೆಸುತ್ತಿರುವ ವುಡ್ ಇಂಡಸ್ಟ್ರೀ, ಹಟ್ಟಿಯಂಗಡಿ ಖಾಸಗಿ ಶಾಲೆ, ಮರಳು ಮಾಫಿಯಾ, ಉಪ್ಪಿನಕುದ್ರು ಶಾಲಾ ಶಿಕ್ಷಕರ ನೀತಿ, ಅಮಾಸೆಬೈಲು ಸರಕಾರಿ ಜಾಗದಲ್ಲಿ ಎದ್ದ ಕಟ್ಟಡ, ಸಾರಿಗೆ ಸಂಪರ್ಕ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ತಹಸೀಲ್ದಾರ್ ಜಿ.ಎಂ.ಬೋರ್ಕರ್, ಇಒ ಡಾ.ನಾಗಭೂಷಣ ಉಡುಪ ಇದ್ದರು.