ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಸರ್ಕಾರ ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ೩ ಲಕ್ಷ ರೂ. ಹಾಗೂ ಶೇ. ೩ ಬಡ್ಡಿದರದಲ್ಲಿ ೩ ರಿಂದ ೧೦ ಲಕ್ಷ ರೂ. ಸಾಲ, ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣ, ಪ್ರತಿ ಲೀ. ಹಾಲಿಗೆ ೫ ರೂ. ಪ್ರೋತ್ಸಾಹ ಧನ ಸೇರಿದಂತೆ ಕೃಷಿಕರ ಕಲ್ಯಾಣಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕೃಷಿಕರು ಇದರ ಸದುಪಯೋಗ ಪಡೆದು, ಕೃಷಿಗೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಕುಂದಾಪುರ, ಆರ್ .ಕೆ ಸಂಜೀವ ರಾವ್ ಜನ್ಮ ಶತಾಬ್ದಿ ಸಂಸ್ಮರಣಾ ಸಮಿತಿ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಇವರ ಸಂಯುಕ್ತ ಆಶ್ರಯದಲಿ, ಡಾ. ಡಿ. ವೀರೇಂದ್ರ ಹಗ್ಡೆಯವರ ಮಾರ್ಗದರ್ಶನದಲ್ಲಿ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕೃಷಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತಾನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೊಸ ಶಕ್ತಿ ಬಂದಿದೆ, ಕೃಷಿ ಉತ್ಸವಗಳ ಮೂಲಕ ಕೃಷಿಕರ ಸಮಸ್ಯೆ ಹಾಗೂ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾದ್ಯವಾಗುತ್ತದೆ, ಇಂದು ಹಳ್ಳಿಗಳು ವೃದ್ಧಾಶ್ರಮದಂತಾಗಿದೆ, ಕೃಷಿಕರ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಅಂಕ ಸಂಬಳಕ್ಕಾಗಿ ನಗರಗಳತ್ತ ಮುಖ ಮಾಡುತ್ತಿದ್ದಾರೆ, ಹೀಗಾಗಿ ಕೃಷಿಭೂಮಿ ಹಡಿಲು ಬೀಳುತ್ತಿದೆ. ರಾಜ್ಯದಲ್ಲಿ ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕರಾವಳಿ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಎಲ್ಲಾ ಸರ್ಕಾರಗಳು ಕಡೆಗಣಿಸಿದೆ ಎಂದ ಅವರು ಕೃಷ್ಣ ಮೇಲ್ದಂಡೆ ಕಾಮಗಾರಿಗೆ ೩೦ ಸಾವಿರ ಕೋಟಿ ರೂ, ಅನುದಾನ ಒದಗಿಸಿದರೇ, ೧೬ ಟಿಎಂಸಿ ನೀರು ಒದಗಿಸುವ ವಾರಾಹಿ ಯೋಜನೆಗೆ ಕಳೆದ ೩೩ ವರ್ಷದಿಂದ ಇದುವರೆಗೆ ಸರ್ಕಾರ ಒದಗಿಸಿರುವುದು ಕೇವಲ ೬೮೦ ಕೋಟಿ ರೂ. ಮಾತ್ರ, ಈ ಬಗ್ಗೆ ಈ ಭಾಗದ ಜನಪ್ರತಿನಿಗಳು ಎಚ್ಚೆತ್ತು ಕರಾವಳಿ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಕೃಷಿ ಅಧಾರಿತ ಈ ಭಾಗದ ರೈತಾಪಿ ಜನರನ್ನು ಅಭಿವೃದ್ಧಿಯ ಪಥದತ್ತ ಮುನ್ನೆಡಸಬೇಕು ಹಾಗೂ ಅವರಲ್ಲಿ ಉಳಿತಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಲು ದುಡಿಮೆಯಲ್ಲಿ ನಿರತರಾಗುವುದಕ್ಕೆ ಅವಕಾಶ ಮಾಡಿಕೊಡಬೇಕು. ಮಹಿಳೆಯರಿಗೆ ವಿಶೇಷವಾದ ಸಹಕಾರದ ಜತೆಗೆ ಮಾರ್ಗದರ್ಶನ ನೀಡುವುದರ ಮೂಲಕ ಸ್ವಾವಲಂಬಿಗಳನ್ನಾಗಿಸಿ ಗೌರವಯುತವಾದ ಜೀವನ ನಡೆಸುವಂತಾಗಬೇಕು ಎನ್ನುವ ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಕಳೆದ ೧೪ ವರ್ಷಗಳ ಹಿಂದೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇಂದಿಗೂ ಅದು ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದರು.
ಆರ್.ಕೆ. ಸಂಜೀವ ರಾವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಕೆ. ಎಸ್. ಪ್ರಕಾಶ ರಾವ್ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದರು. ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ತಾ.ಪಂ. ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪುರುಷೋತ್ತಮ, ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪ, ಸಹಾಯಕ ಕೃಷಿ ನಿರ್ದೇಶಕ ವಿ.ವಿ. ವಿಠ್ಠಲ್ ರಾವ್, ಗ್ರಾ.ಪಂ. ಅಧ್ಯಕ್ಷೆ ಲಲಿತಾ ಖಾರ್ವಿ, ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಕೃಷ್ಣ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಕಾರಿ ಅಮರ ಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು. ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.