ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ12: ಕುಂದಾಪುರದ ಏಕೈಕ ಸಿತಾರ್ ವಿದ್ವಾನ್, ಅವಿನಾಶ್ ಮೆಡಿಕಲ್ಸ್ ನ ಪಾಲುದಾರ ಅವಿನಾಶ್ ಹೆಬ್ಬಾರ್(44) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಅಸಮತೋಲನ ಕಾಣಿಸಿಕೊಂಡು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನಾನುರಾಗಿಯಾಗಿದ್ದ ಅವಿನಾಶ್ ಹೆಬ್ಬಾರ್ ಅವರು ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಒಲವುಳ್ಳವರಾಗಿದ್ದರು. ಅಪರೂಪದ ಸಿತಾರ್ ವಾದಕರಾಗಿ ಹಲವೆಡೆ ಸಂಗೀತ ಕಛೇರಿಗಳನ್ನು ನೀಡಿ ಅಪಾರ ಜನಮನ್ನಣೆ ಗಳಿಸಿದ್ದರು. ಕುಂದಾಪುರ ಸಂಗೀತ ಭಾರತಿ ಟ್ರಸ್ಟ್ನ ವಿಶ್ವಸ್ಥರಾಗಿ, ರೋಟರ್ಯಾಕ್ಟ್ ಅಧ್ಯಕ್ಷರಾಗಿ, ರೋಟರಿ ಕುಂದಾಪುರದ ಮಾಜಿ ಕಾರ್ಯದರ್ಶಿಯಾಗಿ, ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯಲ್ಲಿ ಸಕ್ರೀಯರಾಗಿ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ತಂದೆಯೊಂದಿಗೆ ಸಂಗೀತ ಭಾರತಿ ಟ್ರಸ್ಟ್ ಮೂಲಕ ಕಾರ್ಯಕ್ರಮಗಳನ್ನು ಸಂಘಟಿಸಿ ಕುಂದಾಪುರಕ್ಕೆ ಹಲವು ಸಂಗೀತ ವಿದ್ವಾಂಸರನ್ನು ಕರೆಯಿಸುವಲ್ಲಿ ಶ್ರಮಿಸಿದ್ದರು. ಅವಿನಾಶ್ ಮೆಡಿಕಲ್ಸ್, ಹುಣ್ಸಮಕ್ಕಿಯಲ್ಲಿ ರಬ್ಬರ್ ಕೃಷಿ ಹಾಗೂ ಇನ್ನಿತರ ಉದ್ಯಮಗಳನ್ನು ತೊಡಗಿಕೊಂಡಿದ್ದರೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಮೇ.15ರಂದು ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಸ್ವತಃ ಸಂಗೀತ ಕಛೇರಿ ನೀಡುವವರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಅವಿನಾಶ್ ಹೆಬ್ಬಾರ್ ಅವರ ಅಕಾಲಿಕ ನಿಧನ ಅವರ ಬಂಧುಗಳು, ಹಿತೈಶಿಗಳು ಹಾಗೂ ಅಪಾರ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ. ಅವರು ತಂದೆ ಕುಂದಾಪುರ ಅವಿನಾಶ್ ಮೆಡಿಕಲ್ಸ್ನ ವೈಕುಂಠ ಹೆಬ್ಬಾರ್ ಹಾಗೂ ತಾಯಿ ಆದರ್ಶ ಆಸ್ಪತ್ರೆಯ ಖ್ಯಾತ ವೈದ್ಯೆ ಛಾಯಾ ಹೆಬ್ಬಾರ್, ಸಹೋದರ ಡಾ. ಆದರ್ಶ ಹೆಬ್ಬಾರ್ ಸೇರಿದಂತೆ ಪತ್ನಿ, ಈರ್ವರು ಮಕ್ಕಳು ಹಾಗೂ ಸಹೋದರಿಯನ್ನು ಅಗಲಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/