ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈಚೆಗೆ ಕೊಡೇರಿ ದೋಣಿ ದುರಂತದಲ್ಲಿ ಮೃತರಾದ ಉಪ್ಪುಂದದ ನಾಲ್ವರು ಮೀನುಗಾರರ ಕುಟುಂಬಗಳಿಗೆ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟವು ಭಾನುವಾರ ತಲಾ ₹ 5 ಲಕ್ಷದಂತೆ ₹ 20 ಲಕ್ಷ ನೆರವು ನೀಡಿತು.
ಸಂಘದ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಈ ನೆರವನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಬಿ.ಎಂ.ಸುಕುಮಾರ್ ಶೆಟ್ಟಿ ಮೃತ ಮೀನುಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಂದರು ಅಳಿವೆ ಬಾಗಿನಲ್ಲಿ ಹೂಳು ಎತ್ತಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಬ್ರೇಕ್ ವಾಟರ್ ಕಾಮಗಾರಿ ವಿಸ್ತರಣೆ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಸದಸ್ಯೆ ಪ್ರವೀಳಾ ದೇವಾಡಿಗ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ ಬಟವಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮದನಕುಮಾರ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಪಧಾನ ಕಾರ್ಯದರ್ಶಿ ಡಿ. ಮಂಜುನಾಥ ಖಾರ್ವಿ, ಜೊತೆ ಕಾರ್ಯದರ್ಶಿ ಮಂಜುನಾಥ ಜಿ, ಕಾರ್ಯಕಾರಿ ಸಮಿತಿ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಗ್ನನಾಥ, ಅರಮಕೋಡಿ ಮಹಾಈಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಧರ ಖಾರ್ವಿ ಇದ್ದರು.