ಅಮಾವಾಸ್ಯೆ ಸ್ನಾನಕ್ಕಿಳಿದ ಕೋಟಿಲಿಂಗೇಶ್ವರ ದೇವರು
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಾಣ ಪ್ರಸಿದ್ಧ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವರ ಕೊಡಿ ಹಬ್ಬದ ಪ್ರಯುಕ್ತ ದೇವರ ಅಮಾವಾಸ್ಯೆ ಸ್ನಾನದ ಕಾರ್ಯಕ್ರಮ ನಡೆಯಿತು. ದೇವಳದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ನಡೆಯಿತು.
ದೇವಳದ ವಠಾರದಿಂದ ಹೊರಟ ಶ್ರೀ ಕೋಟಿಲಿಂಗೇಶ್ವರ ದೇವರು ದೊಡ್ಡೋಣಿ ರಸ್ತೆಯ ಮೂಲಕ ಬೀಜಾಡಿ ಅಮಾವಾಸ್ಯೆ ಕಡು ಕಡಲ ತೀರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ಸ್ನಾನದ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.
ದೇವರು ಸಾಗುವ ರಸ್ತೆಯ ಉದ್ದಕ್ಕೂ ಭಕ್ತರು ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ ಹಾಗೂ ರಸ್ತೆಯ ಮೇಲೆ ರಂಗೋಲಿ ಮತ್ತು ಸ್ವಾಗತ ಮಂಟಪಗಳನ್ನು ರಚಿಸಿ ಭಕ್ತಿಯ ಪರಾಕಷ್ಠೆ ಮೆರೆದರು. ಪಂಚವಾದ್ಯಗಳು ಸೇರಿದಂತೆ ದೇವರ ನಾಮಸ್ಮರಣೆಯ ಘೋಷಣೆಗಳು ದೇವರ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.
