ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ನುಗ್ಗಿದ್ದ ಕಳ್ಳರು ಮಾಲಕನಿಗೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದರೋಡೆಗೈದ ಘಟನೆ ಕೋಟ ಬಸ್ ನಿಲ್ದಾಣದ ಬಳಿ ಇರುವ ಶ್ರೀ ದುರ್ಗಾ ಜುವೆಲ್ಲರ್ಸ್’ನಲ್ಲಿ ನಡೆದಿದೆ. ಪಕ್ಕದ ಅಂಗಡಿಯವರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿಹೋಗಿದ್ದು, ಕಳ್ಳರು ಮಾತ್ರ ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಚಿನ್ನದಂಗಡಿಯ ಮಾಲಕ ರವೀಂದ್ರ ಆಚಾರ‍್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ವಿವರ:
ಶನಿವಾರ ಸಂಜೆ ವೇಳೆಗೆ ಗ್ರಾಹಕರಂತೆ ಚಿನ್ನದಂಗಡಿಗೆ ತೆರಳಿದ ಅಪರಿಚಿತರು, ಆಭರಣಗಳನ್ನು ತೋರಿಸುವಂತೆ ಮಾಲಿಕ ರವೀಂದ್ರ ಆಚಾರ‍್ಯ ಅವರಲ್ಲಿ ಕೇಳಿಕೊಂಡಿದ್ದಾರೆ. ಮಾಲಕರೂ ಚಿನ್ನದ ಆಭರಣಗಳನ್ನು ತೋರಿಸಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡ ಗ್ರಾಹಕರು ರವೀಂದ್ರ ಅವರಿಗೆ ತಲೆಗೆ ಹೊಡೆದು ಕೆಳಗೆ ಬೀಳಿಸಿ, ಒಳಗಿನಿಂದಲೇ ಅಂಗಡಿಯ ಶಟರ್ ಹಾಕಿ ಆಭರಣಗಳನ್ನು ಗಂಟುಕಟ್ಟಿದ್ದಾರೆ. ಈ ಘಟನೆ ನಡೆಯುತ್ತಿರುವಾಗ ಪಕ್ಕದ ಅಂಗಡಿಯವರಿಗೆ ಅನುಮಾನ ಬಂದು ಜುವೆಲ್ಲರಿಯ ಮುಚ್ಚಿದ್ದ ಶಟರ್ ಎಳೆದಾಗ ಅಂಗಡಿಯಲ್ಲಿದ್ದ ಕಳ್ಳರು ಪರಾರಿಯಾಗಲು ಯತ್ನಿಸಿದ್ದಾರೆ. ಓರ್ವರನ್ನು ಪಕ್ಕದ ಅಂಗಡಿಯ ಪ್ರಭಾಕರ ಕಾಮತ್ ಹಿಡಿದುಕೊಂಡಿದ್ದರಾದರೂ, ಅಷ್ಟರಲ್ಲಿ ಎರಡು ಬೈಕ್‌ನ್ನು ಸ್ಟಾರ್ಟ್ ಮಾಡಿ ನಿಂತಿದ್ದ ಇರ್ವರು, ಓಡಿ ಬಂದ ಜೊತೆಗಾರರನ್ನು ಕರೆದುಕೊಂಡು ತೆರಳಲು ಯತ್ನಿಸಿದ್ದಾರೆ. ಪಕ್ಕದ ಅಂಗಡಿಯವರ ದರೋಡೆ ಕೋರರು ಕುಳಿತ ಒಂದು ಬೈಕ್‌ನ್ನು ದೂಡಿದ ಪರಿಣಾಮ ಬೈಕ್ ಬಿದ್ದಿದ್ದು, ಬೈಕ್ ಬಿಟ್ಟು ಓರ್ವ ದರೋಡೆಕೋರ ರಸ್ತೆಗೆ ಓಡಿ ತಪ್ಪಿಸಿಕೊಂಡಿದ್ದು, ಇನ್ನೋರ್ವ ಕೋಟ ಕಾಶಿ ಮಠದ ಪಕ್ಕದ ಗಲ್ಲಿಯ ಕತ್ತಲೆಯಲ್ಲಿ ಮರೆಯಾಗಿದ್ದಾನೆ.
ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ, ಗಾಯಗೊಂಡಿದ್ದ ರವೀಂದ್ರ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೋಯ್ಯಿದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ದಾಖಲಿಸಿದ್ದಾರೆ. ಕೋಟ ಪೊಲೀಸ್‌ರು ಸ್ಥಳಕ್ಕೆ ಆಗಮಿಸಿದ ಬಳಿಕ ಸಾರ್ವಜನಿಕರೊಡಗೂಡಿ ಹುಡುಕಾಟ ನಡೆಸಿದ್ದು ಆದರೆ ಯಾವುದೇ ಸುಳಿವು ಸಿಕ್ಕಿಲ್ಲ. ದರೋಡೆ ವೇಳೆ ಪಕ್ಕದ ಅಂಗಡಿಯ ಪ್ರಭಾಕರ ಕಾಮತ್ ಅವರು ತಳ್ಳಾಟದ ಕಾರಣ ಸಾಕಷ್ಟು ಚಿನ್ನದ ಆಭರಣಗಳ ಘಟನಾ ಸ್ಥಳದಲ್ಲಿ ತೊರೆತಿದೆ. ಅಲ್ಲದೇ ಚಿನ್ನದಂಗಡಿಯ ಆಸುಪಾಸಿನ ಬಹುತೇಕ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು ಕಳ್ಳರ ಸುಳಿವಿಗಾಗಿ ತನಿಖೆ ನಡೆಸುತ್ತಿದ್ದಾರೆ.
ಘಟನಾಸ್ಥಳಕ್ಕೆ ಅದೇ ಮಾರ್ಗವಾಗಿ ಸೈಕ್ಲಿಂಗ್ ತೆರಳುತ್ತಿದ್ದ ಉಡುಪಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಅಣ್ಣಾಮಲೈ ಮತ್ತು ತಂಡ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ತಮ್ಮ ಇಲಾಖೆಯವರಿಗೆ ತನಿಖೆ ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಒಟ್ಟಾರೆಯಾಗಿ ಸಾರ್ವಜನಿಕರ ಜನಜಂಗುಳಿ, ರಿಕ್ಷಾ ನಿಲ್ದಾಣ, ಬಸ್ ನಿಲ್ದಾಣ ಇರುವ ಕಡೆಯಲ್ಲಿಯೇ ಕರೆಂಟ್ ಹೋದ ಸಮಯ ನೋಡಿ ಕಳ್ಳತನ ಮಾಡಿರುವುದು ಅನೇಕ ಅನುಮಾನಕ್ಕೆ ಎಡೆಮಾಡಿದೆ.
ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ ನಾಯಕ್, ಕುಂದಾಪುರ ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ ಮತ್ತಿತರ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಶ್ವಾನ ದಳದ ನೆರವು ಪಡೆದು ಹೆಚ್ಚಿನ ತನಿಖೆ ನಡೆಸಿದ್ದಾರೆ.