ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ಮಂಗಳವಾರ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಾಲಿಗ್ರಾಮದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಮಾತನಾಡಿ, ‘ಕೇಂದ್ರ ಸರ್ಕಾರ ಜನರ ಜೀವನದ ಜತೆ ಚೆಲ್ಲಾಟ ಆಡುತ್ತಿದೆ. ಜಾಗತಿಕವಾಗಿ ಪೆಟ್ರೋಲ್ ದರ ಭಾರಿ ಇಳಿಕೆಯಾಗಿದ್ದರೂ, ದೇಶದಲ್ಲಿ ದಿನದಿಂದ ದಿನಕ್ಕೆ ದರ ಏರಿಕೆ ಆಗುತ್ತಿದೆ. ಬಾಯಿ ತೆರೆದರೆ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಅನ್ನುತ್ತಾರೆ. ಜನರಿಗಾಗಿ ಏನು ಮಾಡಿದ್ದಾರೆ ? ಬಣ್ಣಬಣ್ಣದ ಮಾತನ್ನಾಡಿ ಜನರ ತಲೆ ಕೆಡಿಸಿದ್ದಾರೆ,ಇನ್ನಾವ ಕಾರ್ಯ ಮಾಡಲ್ಲಿಲ್ಲ. ಇದನ್ನು ಜನಸಾಮಾನ್ಯ ಅರ್ಥೈಸಿಕೊಳ್ಳಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕುಂದಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೈ.ಬಿ. ರಾಘವೇಂದ್ರ, ನಟರಾಜ್ ಹೊಳ್ಳ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಶ್ರೀನಿವಾಸ್ ಅಮೀನ್, ರವೀಂದ್ರ ಕಾಮತ್, ದಿನೇಶ್ ಬಂಗೇರಾ, ಮೊಸೆಸ್ ರೋಡ್ರೀಗಸ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಭಟನಾ ನಂತರ ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಲಾಯಿತು.