ಕೌಶಲ್ಯಾಧಿವೃದ್ಧಿ ತರಬೇತಿಯಿಂದ ಸ್ವಾವಲಂಭಿ ಬದುಕು: ಶಂಕರನಾರಾಯಣ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಸಂಬಂಧಿ ಕೌಶಲ್ಯಾಭಿವೃದ್ಧಿ ತರಬೇತಿ ಆಂದೋಲನ ರೂಪದಲ್ಲಿ ನಡೆಯುತ್ತಿದ್ದು, ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡಿರುವುದಲ್ಲದೇ ಸ್ವವಲಂಭಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ತೆಂಗು, ಅಡಿಕೆ ಮರ ಹತ್ತುವ ತರಬೇತಿ ಪಡೆಯುವುದರಿಂದ ಉತ್ತಮ ದುಡಿಮೆ ಮಾಡುವುದರ ಜೊತೆಗೆ ಕೃಷಿ ಕಾರ್ಮಿಕರ ಕೊರತೆಯೂ ನೀಗುತ್ತದೆ ಎಂದು ಮಂಗಳೂರು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಹೇಳಿದರು.

ಅವರು ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ, ರೈತ ಶಕ್ತಿ ರೈತ ಸೇವಾ ಒಕ್ಕೂಟ ಉಪ್ಪುಂದ, ತೋಟಗಾರಿಕಾ ಇಲಾಖೆ ಕುಂದಾಪುರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಾಗೂ ಯುವ ಫ್ರೆಂಡ್ಸ್ ಮೇಕೋಡು ೧೧ನೇ ಉಳ್ಳೂರು ಆಶ್ರಯದಲ್ಲಿ ತೆಂಗು ಮತ್ತು ಅಡಿಕೆ ಮರ ಹತ್ತುವ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಕೃಷಿ ಉಪಕರಣ ಪ್ರದರ್ಶನ ಮಾರಾಟ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರಗಳಿಗೆ ಮಾತ್ರವೇ ಸೀಮಿತವಾಗಿರದೇ ರೈತರಿಗೆ ನೆರವಾಗುವಂತಹ ಹಲವಾರು ಯೋಜನೆಗಳನ್ನು ನೀಡಿ ಮಾದರಿಯಾಗಿ ಬೆಳೆದಿದೆ. ರೈತರ ಪ್ರಗತಿಗೆ ನೆರವಾಗುವ ಹಾಗೂ ಅಧ್ಯಯನ ಪ್ರವಾಸ ಕೈಗೊಂಡು ಹೊಸತನ್ನು ಅಳವಡಿಸಿಕೊಳ್ಳುವ ಪ್ರವೃತ್ತಿ ಸಹಕಾರಿ ಸಂಘಗಳಲ್ಲಿ ಬಂದರೆ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ದೊರೆತಂತಾಗುವುದು ಎಂದರು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿ ಕ್ಷೇತ್ರ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಸಂಘಟಿತರಾಗಿ ದುಡಿದಾಗಲೇ ಸಮಸ್ಯೆ ನಿವಾರಣೆ ಸಾಧ್ಯವಿದೆ. ಕೃಷಿಯೂ ಇತರ ಎಲ್ಲಾ ವೃತ್ತಿಯಂತೆ ಗೌರವಯುತವಾದ ಕೆಲಸವಾಗಿದ್ದು ಯುವಕರು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ ನಾಯ್ಕ್, ಸಹಾಯಕ ಅಧಿಕಾರಿ ಅಜಿತ್ ಉಪಸ್ಥಿತರಿದ್ದರು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೈ ಸ್ವಾಗತಿಸಿ, ಶ್ರೀಧರ ಕೆ ವಂದಿಸಿದರು. ವಿಷ್ಣು ಪೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾರ್ಯಾಗಾರ ಮುಂದುವರಿಯಿತು.

Leave a Reply

Your email address will not be published. Required fields are marked *

19 + eight =