ವಿದ್ಯಾರ್ಥಿನಿಗೆ ನಾಯಿ ಕಡಿತ
ಗಂಗೊಳ್ಳಿ: ಶಾಲೆಯಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಬೀದಿ ನಾಯಿಯೊಂದು ಕಚ್ಚಿದ ಘಟನೆ ಗಂಗೊಳ್ಳಿಯಲ್ಲಿ ಇಂದು ಸಂಜೆ ನಡೆದಿದೆ.
ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಬಳಿ ನಾಯಿಯೊಂದು ಕಚ್ಚಿದ ಪರಿಣಾಮ ಗಂಗೊಳ್ಳಿಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಗಾಯಗೊಂಡಿದ್ದಾರೆ. ನಾಯಿ ಕಡಿತದಿಂದ ಗಾಯಗೊಂಡ ಈಕೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಬಳಿಕ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎನ್ನಲಾಗಿದೆ.
ವಿದ್ಯಾರ್ಥಿನಿಗೆ ಕಚ್ಚಿದ ನಾಯಿಯನ್ನು ಸ್ಥಳೀಯ ಯುವಕರು ಓಡಿಸಿಕೊಂಡು ಹೋಗಿ ಹೊಡೆದು ಸಾಯಿಸಿದ್ದಾರೆ. ಇಂದು ಗಂಗೊಳ್ಳಿಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸುಮಾರು ಮೂರ್ನಾಲ್ಕು ಮಂದಿಗೆ ನಾಯಿ ಕಚ್ಚಿದ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗೊಳ್ಳಿಯ ಗಲ್ಲಿಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಳೆಗಾಲದಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ರಸ್ತೆಗಳಲ್ಲಿ ನಡೆದುಕೊಂಡು ಹೋಗಲು ಬಯಪಡುವ ಸ್ಥಿತಿ ನಿರ್ಮಾಣಗೊಂಡಿದೆ. ಆದುದರಿಂದ ಗಂಗೊಳ್ಳಿಯಲ್ಲಿ ವಿಪರೀತವಾಗಿರುವ ಬೀದಿ ನಾಯಿಗಳ ಹಾವಳಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.