ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ವಿವಿಧೆಡೆ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯನ್ನು ಭಕ್ತಿ ಶ್ರದ್ಧಾಪೂರ್ವಕ ಸರಳವಾಗಿ ವಿಜೃಂಭಣೆಯಿಂದ ಶುಕ್ರವಾರ ಆಚರಿಸಲಾಯಿತು.
ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಮಹಿಳಾ ಸಂಘದ ವತಿಯಿಂದ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತವನ್ನು ಆಚರಿಸಲಾಯಿತು. ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಮಹಿಳಾ ಸಂಘದ ಅಧ್ಯಕ್ಷೆ ಅನಿತಾ ಎನ್.ಶೇಟ್ ಹಾಗೂ ಕಾರ್ಯದರ್ಶಿ ಸ್ವಾತಿ ಮಡಿವಾಳ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕೋವಿಡ್ ನಿಯಮಾನುಸಾರ ನಡೆದ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗಂಗೊಳ್ಳಿಯ ಕಲೈಕಾರ ಮಠ ಶ್ರೀ ನಗರ ಮಹಾಕಾಳಿ ಮತ್ತು ಕಲ್ಲುಕುಟ್ಟಿಗ ದೇವಸ್ಥಾನ, ಮ್ಯಾಂಗನೀಸ್ ರಸ್ತೆಯ ಶ್ರೀ ಚಕ್ರೇಶ್ವರಿ ದೇವಸ್ಥಾನ, ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನ ಹಾಗೂ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ನಡೆದ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯಲ್ಲಿ ಮುತ್ತೈದೆಯರು, ಸುಮಂಗಲಿಯರು ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

