ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುತ್ತಿರುವ ಗಂಗೊಳ್ಳಿಯ ಅಳಿವೆಬಾಗಿಲಿನಲ್ಲಿ ಹೂಳೆತ್ತುವಂತೆ ಆಗ್ರಹಿಸಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ ನೇತೃತ್ವದಲ್ಲಿ ಗಂಗೊಳ್ಳಿ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಮೀನುಗಾರಿಕ ಋತು ಪ್ರಾರಂಭವಾಗಿದ್ದು, ಗಂಗೊಳ್ಳಿ ಅಳಿವೆಬಾಗಿನಲ್ಲಿ ಹೂಳೆತ್ತುವ ಕಾಮಗಾರಿಗೆ ಈವರೆಗೆ ಚಾಲನೆ ದೊರೆತಿಲ್ಲ. ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿದ್ದು, ಸಮುದ್ರದ ಅಲೆಗಳ ರಭಸ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಯನ್ನು ಮುಗಿಸಿ ಅಳಿವೆಬಾಗಿಲಿನ ಸಮೀಪ ತಲುಪಿದಾಗ ಮೀನುಗಾರರ ದೋಣಿ, ಬೋಟ್ ಸಂಕಷ್ಟದ ಸ್ಥಿತಿಗೆ ತುತ್ತಾಗುವ ಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇದ್ದು ಇದರಿಂದಾಗಿ ಮೀನುಗಾರರು ಪ್ರಾಣಾಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ. ಅಳಿವೆ ಪ್ರದೇಶದ ಸಮಸ್ಯೆಯಿಂದ ಮೀನುಗಾರರರು ಆತಂಕಕ್ಕೆ ಒಳಗಾಗಿದ್ದು, ಈ ಸಂಬಂಧ ಮೀನುಗಾರರ ಅನೇಕ ಮನವಿಗಳಿಗೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಆದುದರಿಂದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮೀನುಗಾರರ ಜೀವ ರಕ್ಷಣೆಗೆ ಮೊದಲ ಆದ್ಯತೆ ಕೊಡುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಗಳಿಗೆ ಡ್ರಜ್ಜಿಂಗ್ (ಹೂಳೆತ್ತುವ) ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿ ಮನವಿಯಲ್ಲಿ ಆಗ್ರಹಿಸಲಾಗಿದೆ. ಮೀನುಗಾರರು ಮುಂದಿನ ದಿನಗಳಲ್ಲಿ ಮುಷ್ಕರಕ್ಕೆ ಕರೆಕೊಡದ ರೀತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಮನವಿ ಸ್ವೀಕರಿಸಿದ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಅಂಜನಾದೇವಿ, ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಮನವಿಯನ್ನು ಪ್ರಧಾನಮಂತ್ರಿ, ರಾಜ್ಯದ ಮುಖ್ಯಮಂತ್ರಿಗಳು, ಮೀನುಗಾರಿಕೆ ಇಲಾಖೆ ಸಚಿವರು, ಜಿಲ್ಲಾಧಿಕಾರಿಗಳು, ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು, ಸಂಸದರು ಹಾಗೂ ಶಾಸಕರಿಗೂ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಗಣಪತಿ ಖಾರ್ವಿ, ಜತೆ ಕಾರ್ಯದರ್ಶಿ ಶಿವರಾಜ ಖಾರ್ವಿ, ಖಜಾಂಚಿ ಹರೀಶ ಖಾರ್ವಿ, ನಿರ್ದೇಶಕರಾದ ಉದಯ ಖಾರ್ವಿ, ರವಿ ಖಾರ್ವಿ, ಮೋಹನ ಖಾರ್ವಿ, ರಾಜೇಶ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.