ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿ ತೌಹೀದ್ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಜರಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಕೋ.ಶಿವಾನಂದ ಕಾರಂತ್, ಮನುಷ್ಯನಿಗೆ ಕಣ್ಣುಗಳು ಅತ್ಯವಶ್ಯಕವಾಗಿದ್ದು, ಕಣ್ಣುಗಳ ಆರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕಾಲ ಕಾಲಕ್ಕೆ ಕಣ್ಣುಗಳ ತಪಾಸಣೆ ನಡೆಸಿಕೊಂಡು ಬೇಕಾದ ಅಗತ್ಯ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು. ಕಣ್ಣಿನ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಜೀವನ ಅಂಧಕಾರದಲ್ಲಿ ಕಳೆಯಬೇಕಾಗುತ್ತದೆ ಎಂದು ಹೇಳಿದರು.
ಗಂಗೊಳ್ಳಿ ಸೋಷಿಯಲ್ ವೆಲ್ಫೇರ್ ಫೆಡರೇಶನ್ನ ಅಧ್ಯಕ್ಷ ಅಯೂಬ್ ಬೆದ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್ನ ಅಧ್ಯಕ್ಷ ಮಡಿ ನಾಗರಾಜ ಖಾರ್ವಿ, ಉಡುಪಿ ಪ್ರಸಾದ್ ನೇತ್ರಾಲಯದ ತಜ್ಞವೈದ್ಯ ಡಾ.ರೋಹಿತ್, ತೌಹೀದ್ ಎಜ್ಯುಕೇಶನಲ್ ಟ್ರಸ್ಟ್ನ ಉಪಾಧ್ಯಕ್ಷ ಎಂ.ಇನಾಯತುಲ್ಲಾ, ಜಾಮಿಯಾ ಫಾತಿಮಾತುಝೋಹರಾ ಇಸ್ಲಾಹುಲ್ ಬನಾತ್ನ ಆಡಳಿತಾಧಿಕಾರಿ ಮಹಮ್ಮದ್ ಮತೀನ್ ಸಿದ್ಧಿಕಿ, ತೌಹೀದ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಖ್ತರ್ ಅಹಮ್ಮದ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಕೇಶವ ಖಾರ್ವಿ ಸ್ವಾಗತಿಸಿದರು. ಮಹಮ್ಮದ್ ಜಲಾಲ್ ಕಾರ್ಯಕ್ರಮ ನಿರೂಪಿಸಿದರು. ಬಿ.ನಾಗರಾಜ ಖಾರ್ವಿ ವಂದಿಸಿದರು. ಸೋಷಿಯಲ್ ವೆಲ್ಫೇರ್ ಫೆಡರೇಶನ್ ಗಂಗೊಳ್ಳಿ, ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್ ಲೈಟ್ ಹೌಸ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಇವರ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿತ್ತು.