ಗಂಗೊಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ತಿರಸ್ಕೃತ

ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯ ಕೋರಂ ಅಭಾವದ ಹಿನ್ನಲೆಯಲ್ಲಿ ತಿರಸ್ಕೃತಗೊಂಡಿದೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ಸಹಾಯಕ ಕಮೀಷನರ್ ಚಾರುಲತಾ ಸೋಮಲ್ ಅಧ್ಯಕ್ಷತೆಯಲ್ಲಿ ಜರಗಿದ ಗ್ರಾಪಂ ಅಧ್ಯಕ್ಷರ ವಿರುದ್ಧ ಸಲ್ಲಿಸಲಾಗಿರುವ ಅವಿಶ್ವಾಸ ಸೂಚನೆ ಪರ್ಯಾಲೋಚನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಹೊರ ಬಿದ್ದಿದೆ.

ಸಭೆಯಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್‌ನ 33 ಸದಸ್ಯರಲ್ಲಿ ಕೇವಲ ನಾಲ್ಕು ಜನ ಸದಸ್ಯರು ಹಾಜರಾಗಿರುವ ಹಿನ್ನಲೆಯಲ್ಲಿ ಕೋರಂ ಅಭಾವದಿಂದ ಅಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸ ಗೊತ್ತುವಳಿಯ ನಿರ್ಣಯವನ್ನು ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993 ಪ್ರಕರಣ 49ರಂತೆ ತಿರಸ್ಕರಿಸಿ ಸಭೆಯಲ್ಲಿ ಘೋಷಣೆ ಮಾಡಲಾಯಿತು. ಗಂಗೊಳ್ಳಿ ಗ್ರಾಪಂ ನ 33 ಸದಸ್ಯರಲ್ಲಿ 19 ಮಂದಿ ಬಿಜೆಪಿ ಬೆಂಬಲಿಯ ಹಾಗೂ 14 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಗ್ರಾಪಂ ಅಧ್ಯಕ್ಷರು ಸೇರಿದಂತೆ 15 ಮಂದಿ ಬಿಜೆಪಿ ಬೆಂಬಲಿತ ಮತ್ತು ಕಾಂಗ್ರೆಸ್ ಬೆಂಬಲಿತ ಎಲ್ಲಾ 14 ಮಂದಿ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಗಂಗೊಳ್ಳಿ ಪಿಡಿಒ ಪ್ರವೀಣ ಡಿಸೋಜ ಹಾಗೂ ಗ್ರಾಮ ಲೆಕ್ಕಿಗ ರಾಘವೇಂದ್ರ ದೇವಾಡಿಗ ಹಾಗೂ ಸಹಾಯಕ ಕಮೀಷನರ್ ಕಛೇರಿಯ ಸಿಬ್ಬಂದಿಗಳು ಹಾಗೂ ಗಂಗೊಳ್ಳಿ ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಿನ್ನಲೆ: ಕಳೆದ ಸುಮಾರು 2 ವರ್ಷಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಕಳೆದ ಕೆಲವು ತಿಂಗಳಿನಿಂದ ಗ್ರಾಪಂ ಅಧ್ಯಕ್ಷರ ವಿರುದ್ಧ ಅನೇಕ ಸ್ವಪಕ್ಷೀಯ ಗ್ರಾಪಂ ಸದಸ್ಯರು ತೀವ್ರ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಪಕ್ಷದ ಮುಖಂಡರು ಅನೇಕ ಬಾರಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ಹೊಂದಾಣಿಕೆ ಏರ್ಪಡಿಸುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸಿ ಅಧ್ಯಕ್ಷರು ಹಾಗೂ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳಿಗೆ ತೇಪೆ ಹಚ್ಚುವ ಕೆಲಸ ನಡೆಸಲಾಗಿತ್ತು. ಆದರೆ ಗ್ರಾಪಂ ಅಧ್ಯಕ್ಷರ ಕಾರ್ಯಶೈಲಿ ಹಾಗೂ ನಡುವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡು ಬಾರದ ಹಿನ್ನಲೆಯಲ್ಲಿ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಗ್ರಾಪಂ ಅಧ್ಯಕ್ಷರ ವಿರುದ್ಧ ಗ್ರಾಪಂ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ಗ್ರಾಪಂ.ನ 24 ಜನ ಸದಸ್ಯರು ಸಹಿ ಮಾಡಿದ ಅವಿಶ್ವಾಸ ಗೊತ್ತುವಳಿ ಸೂಚನೆಯನ್ನು ಕುಂದಾಪುರದ ಸಹಾಯಕ ಕಮೀಷನರ್ ಅವರಿಗೆ ಸಲ್ಲಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಈ ಹಿನ್ನಲೆಯಲ್ಲಿ ಸಹಾಯಕ ಕಮೀಷನರ್ ಅವರು ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993 ಪ್ರಕರಣ 49ರಂತೆ ಎಲ್ಲಾ ಗ್ರಾಪಂ ಸದಸ್ಯರಿಗೆ ನ.16ರಂದು ಪರ್ಯಾಲೋಚನಾ ಸಭೆಯ ನೋಟಿಸನ್ನು ಜಾರಿಗೊಳಿಸಿದ್ದರು. ಈ ನಡುವೆ ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ನಿರಂತರ ಸಭೆ ನಡೆಸಿ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದ ಬಿಜೆಪಿ ಮುಖಂಡರು, ಅವಿಶ್ವಾಸ ಗೊತ್ತುವಳಿ ಸೂಚನೆ ಮಂಡಿಸಿದ ಗ್ರಾಪಂ. ಸದಸ್ಯರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

Leave a Reply

Your email address will not be published. Required fields are marked *

nineteen − five =